ಏಕರೂಪ ನಾಗರಿಕ ಸಂಹಿತೆಯಿಂದ ವಿನಾಯಿತಿ ಕೋರಿ ನಾಗಾಲ್ಯಾಂಡ್ ನಿರ್ಣಯ- ವಿಡಿಯೋ - ನಾಗಾಲ್ಯಾಂಡ್
Published : Sep 13, 2023, 8:07 AM IST
ಕೊಹಿಮಾ (ನಾಗಾಲ್ಯಾಂಡ್):ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ರಾಜ್ಯವನ್ನು ಸಂಪೂರ್ಣವಾಗಿ ಹೊರಗಿಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ನಾಗಾಲ್ಯಾಂಡ್ ವಿಧಾನಸಭೆ ನಿನ್ನೆ (ಮಂಗಳವಾರ) ಸರ್ವಾನುಮತದಿಂದ ಅಂಗೀಕರಿಸಿತು. ನಿರ್ಣಯಕ್ಕೆ ಎಲ್ಲಾ 60 ಮಂದಿ ಶಾಸಕರು ಒಪ್ಪಿಗೆ ನೀಡಿದರು. ಬಿಜೆಪಿ ಶಾಸಕರು ಕೂಡ ಬೆಂಬಲಿಸಿದರು. ಅಧಿವೇಶನದಲ್ಲಿ ಮುಖ್ಯಮಂತ್ರಿ ನೆಫಿಯು ರಿಯೊ ಅವರು ಸರ್ಕಾರದ ನಿರ್ಣಯ ಮಂಡಿಸಿದರು.
ನಮ್ಮ ಸಾಂಪ್ರದಾಯಿಕ ಕಾನೂನುಗಳು, ಸಾಮಾಜಿಕ ಆಚರಣೆಗಳು ಮತ್ತು ನಾಗಾ ಜನರ ಧಾರ್ಮಿಕ ಆಚರಣೆಗಳಿಗೆ ಯುಸಿಸಿ ಬೆದರಿಕೆ ಉಂಟುಮಾಡುತ್ತದೆ ಎಂದು ನಾಗಾಲ್ಯಾಂಡ್ ಸರ್ಕಾರ ಮತ್ತು ನಾಗಾ ಜನರು ಅಭಿಪ್ರಾಯಪಟ್ಟಿದ್ದಾರೆ. ಸಂಹಿತೆಯನ್ನು ರಾಜ್ಯದ ಮೇಲೆ ಹೇರಿದರೆ ಅದು ಅತಿಕ್ರಮಣಕ್ಕೆ ಎಡೆಮಾಡಿಕೊಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಕುರಿತು ರಾಜ್ಯ ಸರ್ಕಾರದಿಂದ 22ನೇ ಕಾನೂನು ಸಮಿತಿಗೆ ಈಗಾಗಲೇ ಪತ್ರ ಕಳುಹಿಸಲಾಗಿದ್ದು, ವಿನಾಯಿತಿ ನೀಡುವಂತೆ ಕೋರಲಾಗಿದೆ. ನಾಗಾಲ್ಯಾಂಡ್‌ಗೆ ವಿಶೇಷ ಸಾಂವಿಧಾನಿಕ ಸುರಕ್ಷತೆ ನೀಡುವ ವಿಧಿ 371 (ಎ)ನ ನಿಬಂಧನೆಗಳನ್ನು ಯುಸಿಸಿ ದುರ್ಬಲಗೊಳಿಸುತ್ತದೆ. ಮದುವೆ ಮತ್ತು ವಿಚ್ಛೇದನ, ಪಾಲನೆ, ದತ್ತು ಮತ್ತು ನಿರ್ವಹಣೆ, ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳ ಮೇಲೆ ಒಂದೇ ಕಾನೂನು ಹೊಂದಿರುವುದು ಯುಸಿಸಿಯ ಉದ್ದೇಶ. ಆದರೆ ಬೆಂಗಾಲ್ ಈಸ್ಟರ್ನ್ ಫ್ರಾಂಟಿಯರ್ ರೆಗ್ಯುಲೇಶನ್ ಆ್ಯಕ್ಟ್ 1873 (ಬಿಇಎಫ್ಆರ್) ಆಧಾರದ ಮೇಲೆ ನಾಗಾಲ್ಯಾಂಡ್‌ಗೆ ವಿನಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಏಕರೂಪ ನಾಗರಿಕ ಸಂಹಿತೆ ಎಂದರೇನು?:ದೇಶದಲ್ಲಿ ಪ್ರತಿಯೊಂದು ಜಾತಿ, ಧರ್ಮ, ಪಂಗಡ ಹಾಗೂ ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು ಯುಸಿಸಿ ಉದ್ದೇಶ. ಇದು ಜಾತ್ಯತೀತ ಕಾನೂನಾಗಿದ್ದು, ಅನುಷ್ಠಾನವಾದರೆ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ. ಇನ್ನೂ ಸರಳವಾಗಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆಯು ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ. ಸಂವಿಧಾನದ 44ನೇ ವಿಧಿಯಲ್ಲಿ ಎಲ್ಲ ನಾಗರಿಕರಿಗೂ ಸಮಾನ ಕಾನೂನನ್ನು ಜಾರಿಗೆ ತರಲು ಹೇಳಲಾಗಿದೆ. ದೇಶದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ಕ್ರಿಮಿನಲ್ ಕೋಡ್ ಇದೆ. ಆದರೆ ಏಕರೂಪದ ನಾಗರಿಕ ಕಾನೂನು ಇಲ್ಲ.
ಇದನ್ನು ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ: ಬುಡಕಟ್ಟು ಜನಾಂಗ ಹೊರಗಿಡಲು ಸಲಹೆ