ದಸರಾ ಜಂಬೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
Published : Oct 10, 2023, 8:56 AM IST
|Updated : Oct 10, 2023, 10:06 AM IST
ಮೈಸೂರು:ಮೈಸೂರು ದಸರಾ ಜಂಬೂ ಸವಾರಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆ ಜಂಬೂಸವಾರಿ ಹೊತ್ತು ಸಾಗಲಿರುವ ಅಭಿಮನ್ಯು ಆನೆಗೆ, ಭಾರೀ ಮಳೆಯ ನಡುವೆಯೂ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತು ಸಾಗಲಿದೆ. ಈ ಆನೆಗೆ ಸೋಮವಾರ ಸಂಜೆ ಮರದ ಅಂಬಾರಿ ಕಟ್ಟಿ ತಾಲೀಮು ಮಾಡಲು ಪ್ರಾರಂಭಿಸುತ್ತಿದ್ದಂತೆ ಜೋರು ಮಳೆ ಆರಂಭವಾಗಿತ್ತು. ಇದನ್ನೇ ಶುಭ ಸೂಚನೆ ಎಂದು ಪರಿಗಣಿಸಿ ಅರಮನೆಯ ಹಿಂಭಾಗದಲ್ಲಿ ಚಿನ್ನದ ಅಂಬಾರಿ ಕಟ್ಟುವ ಸ್ಥಳದಲ್ಲಿ ಅಭಿಮನ್ಯುಗೆ 750 ಕೆ.ಜಿ ತೂಕದ ಮರದ ಅಂಬಾರಿ, ಜೊತೆಗೆ ಇತರ 250 ಕೆ.ಜಿ ನಮ್ದಾ ಮತ್ತು ಗಾದಿಯನ್ನು ಹಾಕಿ ಮಳೆಯ ನಡುವೆಯೂ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೀಮು ನಡೆಸಿದರು.
ಇದಕ್ಕೂ ಮೊದಲು ಅರ್ಚಕರಾದ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಬಳಿಕ ಮರದ ಅಂಬಾರಿ ಹೊತ್ತು ಅಭಿಮನ್ಯು ಸಾಗಿದರೆ, ಅದರ ಅಕ್ಕಪಕ್ಕದಲ್ಲಿ ಹೆಣ್ಣಾನೆಗಳು ಸಾಗಿದವು. ಅಭಿಮನ್ಯು ಹಿಂಭಾಗದಲ್ಲಿ ಇತರ 11 ಆನೆಗಳು ಅರಮನೆಯ ಬಲರಾಮ ಗೇಟ್ ಮುಖಾಂತರ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತದ ಮೂಲಕ ಬನ್ನಿ ಮಂಟಪದವರೆಗೆ ಸಾಗಿದವು.
ಇದನ್ನೂ ಓದಿ:ಮೈಸೂರು ದಸರಾ: ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ