ಸಿದ್ದಗಂಗಾ ಮಠದಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ-ವಿಡಿಯೋ
ತುಮಕೂರು:ಕಲ್ಪತರು ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಸಿದ್ದಲಿಂಗೇಶ್ವರ ಜಾತ್ರೆ ಪ್ರಯುಕ್ತ ಸಿದ್ದಲಿಂಗೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಮಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ಹಾಗೂ ಶ್ರೀ ಉದ್ದಾನ ಶಿವಯೋಗಿಗಳ ಗದ್ದುಗೆ ಬಳಿಯಿಂದ ಶ್ರೀ ಅಟವಿ ಶ್ರೀಗಳ ಗದ್ದುಗೆಯವರೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಿತು. ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಶಿವರಾತ್ರಿ ಪ್ರಯುಕ್ತ ಸಿದ್ದಗಂಗಾ ಮಠಕ್ಕೆ ಲಕ್ಷಾಂತರ ಜನರು ಆಗಮಿಸಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನದ ಜೊತೆಗೆ ಶ್ರೀ ಶಿವಕುಮಾರ ಸ್ವಾಮಿಜಿಗಳ ಗದ್ದುಗೆ, ಉದ್ದಾನ ಶಿವಯೋಗಿಗಳ ಗದ್ದುಗೆ ಹಾಗೂ ಅಟವಿ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ಮಹಾ ಶಿವರಾತ್ರಿಯ ಪ್ರಯುಕ್ತ ನಡೆಯುತ್ತಿರುವ ಜಾತ್ರಾಮಹೋತ್ಸವ ಭಾನುವಾರ ರಥೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಿತ್ತು. ಶಿವರಾತ್ರಿ ಹಿನ್ನೆಲೆ ಮಠಕ್ಕೆ ತುಮಕೂರು, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಮತ್ತು ಮಠದಲ್ಲಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ಇದನ್ನೂ ಓದಿ:ಸೋಮಾವತಿ ಅಮಾವಾಸ್ಯೆ ಸ್ನಾನ 2023: ಹರಿದ್ವಾರದ ಸ್ನಾನಘಟ್ಟಗಳಲ್ಲಿ ಜನಜಂಗುಳಿ