ದೆಹಲಿ- ಮುಂಬೈನಲ್ಲಿ ಧಾರಾಕಾರ ಮಳೆ: ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿರುಸಿನ ಗಾಳಿ ಮತ್ತು ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತು. ಅದರಂತೆ ನಿನ್ನೆ ರಾತ್ರಿಯಿಂದ ದಿಲ್ಲಿಯಲ್ಲಿ ಮಳೆ ಸುರಿಯುತ್ತಿದೆ. ಇದಲ್ಲದೇ, ಮುಂಬೈನಲ್ಲೂ ವರುಣದೇವ ಕೃಪೆ ತೋರಿದ್ದಾನೆ.
ದೆಹಲಿಯಲ್ಲಿ ಮಳೆಯಾಗುತ್ತಿರುವ ಕಾರಣ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರಾತ್ರಿಯಿಂದ ವ್ಯಾಪಕವಾಗಿ ವರುರ್ಣಾಭಟ ಮುಂದುವರಿದ ಕಾರಣ 15 ಕ್ಕೂ ಹೆಚ್ಚು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. 10 ವಿಮಾನಗಳ ಮಾರ್ಗವನ್ನೂ ಬದಲಿಸಲಾಗಿದೆ. 7 ವಿಮಾನಗಳನ್ನು ಜೈಪುರಕ್ಕೆ, 3 ವಿಮಾನಗಳನ್ನು ಲಖನೌಗೆ ತೆರಳಲು ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ, ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನಲ್ಲೂ ಇದೇ ಸ್ಥಿತಿ ಮುಂದುವರಿದಿದೆ. ವರುಣರಾಯ ಎಡೆಬಿಡದೆ ಸುರಿಯುತ್ತಿರುವ ಕಾರಣ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಯಿದೆ. ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಇದನ್ನೂ ಓದಿ:ಪ್ರಧಾನಿ ಭದ್ರತಾ ಲೋಪ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಪಂಜಾಬ್ ಸರ್ಕಾರ