ಮುಧೋಳ ಮತ ಕ್ಷೇತ್ರ: ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸತೀಶ ಬಂಡಿ ವಡ್ಡರ ನಾಮಪತ್ರ - ಪ್ರವಾಹ ಕೋವಿಡ್ ಕಾಲದಲ್ಲಿ ಜನರೊಂದಿಗೆ
ಬಾಗಲಕೋಟೆ:ಮುಧೋಳ ಮೀಸಲು ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸತೀಶ ಬಂಡಿ ವಡ್ಡರ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಗೆ ಮುಂಚೆ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಜತೆ ಹಾಗೂ ಅವರ ಬೆಂಬಲಿಗರೊಂದಿಗೆ ಲೋಕೇಶ್ವರ ದೇವಾಲಯದ ಆಣೆ ಪ್ರಮಾಣ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದರು. ಆದರೆ, ಈ ಆಣೆ ಪ್ರಮಾಣ ಬಹಳ ದಿನ ಉಳಿಯದೇ ಬಂಡಾಯದ ಬಾವುಟ ಹಾರಿಸಿದ್ದಾರೆ.
ಪ್ರವಾಹ ಕೋವಿಡ್ ಕಾಲದಲ್ಲಿ ಜನರೊಂದಿಗೆ ಇದ್ದೆ: ಈ ಬಗ್ಗೆ ಈ ಟಿವಿ ಭಾರತದೊಂದಿಗೆ ಸತೀಶ ಬಂಡಿವಡ್ಡರ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ನಾನೀಗ ರಾಜೀನಾಮೆ ನೀಡಿರುವೆ. ಆಣೆ ಪ್ರಮಾಣ ಮಾತು ಮುಂದುವರೆಸಿಕೊಂಡು ಹೋಗುವುದು ಸರಿಯಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ 35 ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿರುವೆ.
ಕ್ಷೇತ್ರದಲ್ಲಿ ಕೋವಿಡ್ ಸೇರಿದಂತೆ ಪ್ರವಾಹದ ಸಮಯದಲ್ಲಿ ಜನರ ಕಣ್ಣು ಒರೆಸುವಂತಹ ಸಾಮಾಜಿಕ ಕೆಲಸ ಕಾರ್ಯ ಮಾಡಿರುವೆ. ಹೀಗಾಗಿ ಈ ಭಾರಿ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಸಿಗಬೇಕಿತ್ತು. ಆದರೆ ವಂಚನೆ ಆಗಿದೆ. ಇದರಿಂದ ಬೇಸತ್ತ ಅಭಿಮಾನಿಗಳು ಪಕ್ಷೇತರ ಸ್ಪರ್ಧೆಗೆ ಒತ್ತಾಯಿಸಿದರು. ಹೀಗಾಗಿ ನಾಮಪತ್ರ ಸಲ್ಲಿಸಿದೆ. ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಸಚಿವ ಕಾರಜೋಳರ ಪೈಪೋಟಿ ಇದ್ದರೂ ಬಿಜೆಪಿ ದುರಾಡಳಿತದಿಂದ ಬೇಸತ್ತ ಜನತೆ ಹಾಗೂ ಎಲ್ಲ ಜಾತೀಯ ಮತದಾರರು ಪಕ್ಷಾತೀತವಾಗಿ ಬೆಂಬಲಿಸುತ್ತಾರೆ. ಹೀಗಾಗಿ ಅಧಿಕ ಮತಗಳಿಂದ ಜಯಗಳಿಸುವುದು ಖಚಿತ ಎಂದು ಪಕ್ಷೇತರ ಅಭ್ಯರ್ಥಿ ಸತೀಶ ಬಂಡಿವಡ್ಡರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಕಾರವಾರ-ಅಂಕೋಲಾ ಕ್ಷೇತ್ರ: ಬಿಜೆಪಿ ಶಾಸಕಿ ವಿರುದ್ಧ ಕಣಕ್ಕಿಳಿದ ಬಂಡಾಯ ಅಭ್ಯರ್ಥಿಗಳು