ಮಹಾಶಿವರಾತ್ರಿಗೆ ಮುದ್ದೇಬಿಹಾಳ ಭಕ್ತರಿಂದ ಶಿವಲಿಂಗ ತಯಾರಿ: ವಿಡಿಯೋ
ಮುದ್ದೇಬಿಹಾಳ(ವಿಜಯಪುರ): ಶಿವರಾತ್ರಿ ಹಬ್ಬದಂದು ಉಪವಾಸ ಮಾಡುವುದನ್ನು, ಇಡೀ ರಾತ್ರಿ ಶಿವಧ್ಯಾನ ಮಾಡುತ್ತ ಜಾಗರಣೆ ಮಾಡುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮುದ್ದೇಬಿಹಾಳದ ಮಹಿಳೆಯರು ಈ ಬಾರಿಯ ಶಿವರಾತ್ರಿಗೆ ಒಂದು ಲಕ್ಷದ ಹನ್ನೊಂದು ಸಾವಿರದ ಒಂದುನೂರ ಹನ್ನೊಂದು ಲಿಂಗಗಳನ್ನು ಸ್ವತಃ ತಯಾರಿಸಿ, ಲಿಂಗಾರ್ಚನೆ ಮಾಡಲು ಪಣತೊಟ್ಟಿದ್ದಾರೆ.
ಹೌದು, ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಇಂತಹದ್ದೊಂದು ಭಕ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಶ್ರೇಷ್ಠವಾದ ಹುತ್ತದ ಮಣ್ಣನ್ನು ತರಲಾಗಿದ್ದು, ಮಡಿಯಿಂದ ಒಂದು ಅಥವಾ ಎರಡು ಇಂಚಿನಷ್ಟು ಎತ್ತರದ ಚಿಕ್ಕ ಚಿಕ್ಕ ಶಿವಲಿಂಗಗಳನ್ನು ತಯಾರಿಸುತ್ತಿದ್ದಾರೆ. ಒಟ್ಟಾರೆ ಯಾವುದೇ ಜಾತಿ - ಭೇದವಿಲ್ಲದೇ ಈ ಬಾರಿಯ ಶಿವರಾತ್ರಿಯ ಪವಿತ್ರ ದಿನದಂದು ವಿಶೇಷವಾಗಿ 1,11,111 ಶಿವಲಿಂಗಗಳಿಗೆ ಬಿಲ್ವಪತ್ರೆ, ಪುಷ್ಪಾರ್ಚನೆ ಮಾಡುವ ಆಶಯವನ್ನು ಭಕ್ತರು ಹೊಂದಿದ್ದಾರೆ.
ಇಂತಹದ್ದೊಂದು ವಿಶೇಷ ಆಲೋಚನೆ ಮೊದಲು ಬಂದಿದ್ದು ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ ಅವರಿಗೆ. ಈ ವಿಷಯವನ್ನು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ ಸೇರಿದಂತೆ ಇನ್ನಿತರ ಬಳಿ ಹಂಚಿಕೊಂಡು ಎಲ್ಲರೂ ಸೇರಿ ಚರ್ಚೆ ಮಾಡಿ ಭಕ್ತಿಯ ಕಾರ್ಯಕ್ಕೆ ಮುಂದಾಗಿದ್ದಾರೆ. ಹಲವು ತಾಯಂದಿರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿರುವುದು ಭಕ್ತಿಯ ಪರಾಕಾಷ್ಠೆ ಮೆರೆದಂತಾಗಿದೆ.
ಇದನ್ನೂ ಓದಿ:ಶಿವರಾತ್ರಿಯ ಸಂಭ್ರಮ: ಮರಳು ಶಿಲ್ಪಗಳ ಮೂಲಕ ಭಕ್ತಿ ಸಮರ್ಪಿಸಿದ ಕಲಾವಿದರು