ಶರತ್ ಪತ್ನಿ ಕಣ್ಣೀರು ಹಾಕಿದ್ದನ್ನು ಅನುಕರಿಸಿ ಎಂಟಿಬಿ ನಾಗರಾಜ್ ವ್ಯಂಗ್ಯ: ತಿರುಗೇಟು ಕೊಟ್ಟ ಶರತ್ ಬಚ್ಚೇಗೌಡ - ಈಟಿವಿ ಭಾರತ ಕರ್ನಾಟಕ
ಹೊಸಕೋಟೆ(ಬೆಂಗಳೂರು): ಶರತ್ ಬಚ್ಚೇಗೌಡರ ಪರ ಚುನಾವಣಾ ಪ್ರಚಾರಕ್ಕಾಗಿ ಪತ್ನಿ ಪ್ರತಿಭಾ ಆಗಮಿಸಿದ್ದ ವೇಳೆ ಕಿಡಿಗೇಡಿಯೊಬ್ಬ ಅವರ ಕಾರಿನ ಮೇಲೆ ದಾಳಿ ನಡೆಸಿ, ಕಾರಿನಲ್ಲಿದ್ದ ಪರ್ಸ್, ಬುಕ್, ಮೊಬೈಲ್ ಕದ್ದು ಪರಾರಿಯಾಗಿದ್ದ. ಈ ಘಟನೆಯಿಂದ ಶರತ್ ಬಚ್ಚೇಗೌಡ ಅವರ ಪತ್ನಿ ಕಣ್ಣೀರು ಹಾಕಿದ್ದರು. ಚುನಾವಣಾ ಪ್ರಚಾರದ ವೇಳೆ ಎಂಟಿಬಿ ನಾಗರಾಜ್, ಪ್ರತಿಭಾ ಕಣ್ಣೀರು ಹಾಕಿದ್ದನ್ನು ಅನುಕರಣೆ ಮಾಡಿ ವ್ಯಂಗ್ಯ ಮಾಡಿದ್ದರು. ಈಗ ಇದೇ ವಿಚಾರ ಎಂಟಿಬಿ ಮತ್ತು ಶರತ್ ಬಚ್ಚೇಗೌಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ನಡುವೆ ಮಾತಿನ ಸಮರ ಆಗಾಗ ನಡೆಯುತ್ತಿರುತ್ತದೆ, ಇದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ, ಎಂಟಿಬಿ ನಾಗರಾಜ್ ವ್ಯಂಗ್ಯವಾಗಿ ಕಣ್ಣೀರು ಹಾಕಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಮೇಲೆ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಟಿಬಿ ನಾಗರಾಜ್ ಮಾತನಾಡಿ "ಚುನಾವಣೆಯಲ್ಲಿ ಸೋಲುವ ಭಯದಿಂದ ಅನಗತ್ಯವಾಗಿ ನಮ್ಮ ಮೇಲೆ ಅಪಪ್ರಚಾರ ಮಾಡಿ ಡ್ರಾಮಾ ಮಾಡ್ತಿದ್ದಾರೆ, ಇಂಥಾ ನೀಚ ರಾಜಕಾರಣ ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡುತ್ತಿರುವುದು ನೀವು" ಎಂದು ಶರತ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಎಂಟಿಬಿ ನಾಗರಾಜ್ ವ್ಯಂಗ್ಯ ಮಾಡಿರುವುದಕ್ಕೆ ತಿರುಗೇಟುಕೊಟ್ಟಿರುವ ಶಾಸಕ ಶರತ್ ಬಚ್ಚೇಗೌಡ, "ಒಬ್ಬ ಮಂತ್ರಿಯಾಗಿ, ಎಪತ್ತು ವರ್ಷ ವಯಸ್ಸಾದ ವ್ಯಕ್ತಿಯಾಗಿ ಬಹಿರಂಗ ಪ್ರಚಾರದಲ್ಲಿ ಒಬ್ಬ ಹೆಣ್ಣು ಮಗು ಕಣ್ಣೀರು ಹಾಕಿದ್ದನ್ನು ತಮಾಷೆ ಮಾಡಿ, ಕೇಕೆ ಹಾಕಿ ನಗುತ್ತೀರಲ್ಲ ಇವರಿಗೆ ಮಾನ ಮರ್ಯಾದೆ ಇದೆಯಾ?. ಇವರು ಮೂರು ಬಿಟ್ಟಂಥವರು" ಎಂದು ಕಿಡಿಕಾರಿದರು.
ಇದನ್ನೂ ಓದಿ:ಕೊಪ್ಪಳ: ಮತಯಾಚನೆಗೆ ಬಂದ ಮಾಜಿ ಸಚಿವ ಶಿವರಾಜ ತಂಗಡಗಿಗೆ ಗ್ರಾಮಸ್ಥರಿಂದ ತರಾಟೆ