ಬೆಂಗಳೂರು ತಲುಪಿದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ: ಗಣ್ಯರಿಂದ ಗೌರವ ನಮನ
Published : Nov 24, 2023, 10:56 PM IST
|Updated : Nov 24, 2023, 11:03 PM IST
ಬೆಂಗಳೂರು : ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹುತಾತ್ಮರಾದ 63 ನೇ ರಾಷ್ಟ್ರೀಯ ರೈಫಲ್ಸ್ನ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ತಲುಪಿದೆ.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಿದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಗಣ್ಯರು ಪುಷ್ಟಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ತೇಜಸ್ವಿ ಸೂರ್ಯ, ಇಂಧನ ಸಚಿವ ಕೆಜೆ ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಇತರರು ಇದ್ದರು.
ಯೋಧ ಪ್ರಾಂಜಲ್ ಅವರು ಮೂಲತಃ ಮೈಸೂರು ಜಿಲ್ಲೆಯವರಾಗಿದ್ದು, ಅವರ ಕುಟುಂಬಸ್ಥರು ಆನೇಕಲ್ನ ಜಿಗಣಿಯ ನಂದನವನ ಬಡಾವಣೆಯಲ್ಲಿ ವಾಸವಿದ್ದಾರೆ. ಪ್ರಾಂಜಲ್ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ ವೆಂಕಟೇಶ್ ಅವರ ಏಕೈಕ ಪುತ್ರರಾಗಿದ್ದರು. ಹೆಚ್ಎಎಲ್ನಿಂದ ನಿವಾಸದತ್ತ ಪ್ರಾಂಜಲ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿದ್ದು, ನಾಳೆ ಬೆಳಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸೇನಾ ಗೌರವಗಳೊಂದಿಗೆ ಬೆಂಗಳೂರು- ಹೊಸೂರು ಹೆದ್ದಾರಿಯ ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:ಬೆಂಗಳೂರು: ವೀರಮರಣವನ್ನಪ್ಪಿದ ಕ್ಯಾಪ್ಟನ್ ಶ್ರದ್ಧಾಂಜಲಿಗೆ ಜಿಗಣಿ ನಂದನವನದಲ್ಲಿ ಸಕಲ ಸಿದ್ಧತೆ