ಜೀವ ಪಣಕ್ಕಿಟ್ಟು ನೂರಾರು ಜನರ ಸಂಚಾರ.. ಕಿಕ್ಕಿರಿದು ತುಂಬಿದ ಬಸ್ನಲ್ಲಿ ಶಾಲಾ ಮಕ್ಕಳ ಪ್ರಯಾಣ.. - ಜೀವ ಪಣಕ್ಕಿಟ್ಟು ನೂರಾರು ಜನರ ಸಂಚಾರ
ಕಲಬುರಗಿ: ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳಬೇಕು ಎಂಬ ಒತ್ತಡದಲ್ಲಿರುತ್ತಾರೆ. ಆದರೆ ಚಿಂಚೋಳಿಯಿಂದ ಕಲಬುರಗಿ ಮಾರ್ಗಕ್ಕೆ ಬೆಳಗ್ಗೆ ಬಸ್ ಸಮಸ್ಯೆ ಬಹು ದೊಡ್ಡ ಅನಾನುಕೂಲ ಆಗಿದೆ. ಇದರಿಂದ ಒಂದೇ ಬಸ್ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ.
ಇನ್ನು ಶಾಲಾ ಮಕ್ಕಳು ಕಿಕ್ಕಿರಿದು ತುಂಬಿದ ಬಸ್ನಲ್ಲೇ ಪ್ರಯಾಣಿಸುತ್ತಿದ್ದು, ಬಸ್ ಹತ್ತುವ ಬಾಗಿಲಿನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುವ ಸ್ಥಿತಿ ಬಂದೋದಗಿದೆ. ಶಾಲಾ ಮಕ್ಕಳಾಗಲಿ ಮತ್ತು ಪ್ರಯಾಣಿಕರಾಗಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಕೆಲಸಕ್ಕೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಂಚೋಳಿ ಸಾರಿಗೆ ಘಟಕದ ಅಧಿಕಾರಿಗಳು ಬಸ್ಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಚಿಂಚೋಳಿಯಿಂದ ಕಲಬುರಗಿ ಗೆ ಬೆಳಗ್ಗೆ 7 ಗಂಟೆಗೆ ಬಸ್ ಬಿಟ್ಟರೆ ನಂತರ 9:30ರ ವರೆಗೆ ಒಂದು ಬಸ್ ಬಿಡುವುದಿಲ್ಲವಂತೆ. 9:30ರನಂತರ ಒಂದೇ ಬಾರಿ 2 ಬಸ್ ಬಿಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬಹಳಷ್ಟು ತೊಂದರೆ ಆಗುತ್ತಿದೆಯಂತೆ. ಹೀಗಾಗಿ ಕಲಬುರಗಿ ನಗರಕ್ಕೆ ಉದ್ಯೋಗಕ್ಕೆ ಹಾಗೂ ಆಸ್ಪತ್ರೆಗೆ ಹೋಗುವವರು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೆ ಒಂದು ಬಸ್ ಚಿಂಚೋಳಿಯಿಂದ ಕಲಬುರಗಿಗೆ ಓಡಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.