ದೇವರ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ ಹಣ ಸೀಜ್ - ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್
ಚಿಕ್ಕಮಗಳೂರು :ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ ಹಣ ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ನಡೆದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿಕೊಂಡಿದ್ದಾರೆ. ಈ ವೇಳೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫಾರ್ಚುನರ್ ವಾಹನದಲ್ಲಿ ಬಂದಿದ್ದ ಪಾವಗಡ ಮೂಲದ ವೈದ್ಯಾಧಿಕಾರಿ ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿತ್ತು. ಪೊಲೀಸರು ವಿಚಾರಿಸಿದಾಗ ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದರು ಎನ್ನಲಾಗಿದೆ. ಆದರೆ ಯಾವುದೇ ದಾಖಲೆ ಇಲ್ಲದ ಕಾರಣ ಹಣವನ್ನು ಪೊಲೀಸ್ ಮತ್ತು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿ 50 ಸಾವಿರ ರೂ. ನಗದು ಹೊಂದಲು ಅವಕಾಶವಿದೆ. ಅದಕ್ಕಿಂತ ಮೇಲ್ಪಟ್ಟು ನಗದು ಹೊಂದಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಣದ ಮೂಲ ಯಾವುದು? ಅದನ್ನು ಯಾವ ಉದ್ದೇಶಕ್ಕಾಗಿ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ಚೆಕ್ ಪೋಸ್ಟ್ಗಳಲ್ಲಿ ಹೇಳಬೇಕಾಗುತ್ತದೆ. ಒಂದು ವೇಳೆ ಆತ ನೀಡುತ್ತಿರುವ ಕಾರಣ, ದಾಖಲೆ ಸಮರ್ಪಕವಾಗಿಲ್ಲ ಎಂಬುದು ದೃಢಪಟ್ಟರೆ ಹಣ ಜಪ್ತಿ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ದಿನದಿಂದ ದಿನಕ್ಕೆ ದಾಖಲೆ ಇಲ್ಲದ ಹಣ ವಶ ಪಡಿಸಿಕೊಳ್ಳುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿವೆ
ಇದನ್ನೂ ಓದಿ;ಮನೆಯಲ್ಲಿ ಒಂದು ಕೋಟಿ ಮೌಲ್ಯದ ನಿಷೇಧಿತ 1000 ಮುಖ ಬೆಲೆಯ ನೋಟುಗಳು ಪತ್ತೆ: ವಿಡಿಯೋ