ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ವೃದ್ಧ - ಶರ್ಟ್ ಜೇಬಿನಲ್ಲಿದ್ದ ಫೋನ್ ಸ್ಫೋಟ
ತ್ರಿಶೂರ್ (ಕೇರಳ): ವೃದ್ಧರೊಬ್ಬರು ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಮರೋಟ್ಟಿಚಾಲ್ ತ್ರಿಶೂರ್ನಲ್ಲಿ ನಡೆದಿದೆ. ಮರೊಟ್ಟಿಚಾಲ್ ನಿವಾಸಿ ಇಲಿಯಾಸ್ (70) ಎಂಬುವರ ಫೋನ್ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಲಿಯಾಸ್ ಹೋಟೆಲ್‌ನಲ್ಲಿ ಕುಳಿತು ಟೀ ಕುಡಿಯುತ್ತಿದ್ದಾಗ ಅವರ ಶರ್ಟ್ ಜೇಬಿನಲ್ಲಿದ್ದ ಫೋನ್ ಸ್ಫೋಟಗೊಂಡಿದೆ.
ತಕ್ಷಣವೇ ಇಲಿಯಾಸ್ ತಮ್ಮ ಜೇಬಿನಿಂದ ಫೋನ್ ತೆಗೆದು ನೆಲದ ಮೇಲೆ ಎಸೆದಿದ್ದಾರೆ. ಅಷ್ಟರಲ್ಲಿ ಅಂಗಿಗೆ ಬೆಂಕಿ ಹೊತ್ತಿಕೊಂಡಿದೆ. ಆದರೆ ತಕ್ಷಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟಗೊಂಡ ಮೊಬೈಲ್ ಫೋನ್ ಅನ್ನು ವರ್ಷದ ಹಿಂದೆ ತ್ರಿಶೂರ್ ಪೋಸ್ಟ್ ಆಫೀಸ್ ರಸ್ತೆಯ ಅಂಗಡಿಯಿಂದ ಒಂದು ಸಾವಿರ ರೂಪಾಯಿಗೆ ಖರೀದಿಸಲಾಗಿದೆ. ಸಾಮಾನ್ಯ ಕೀಪ್ಯಾಡ್ ಫೋನ್ ಇದಾಗಿದೆ. ಈ ದೃಶ್ಯ ಹೋಟೆಲ್ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಏಪ್ರಿಲ್ 25 ರಂದು ತ್ರಿಶೂರ್‌ನ ತಿರುವಿಲುಅಮಲದಲ್ಲಿ ಎಂಟು ವರ್ಷದ ಬಾಲಕಿ ಮೊಬೈಲ್ ಫೋನ್ ಸ್ಫೋಟಗೊಂಡು ಸಾವನ್ನಪ್ಪಿದ್ದಳು. 3 ನೇ ತರಗತಿ ವಿದ್ಯಾರ್ಥಿನಿ ಆದಿತ್ಯಶ್ರೀ ತನ್ನ ತಂದೆಯ ಮೊಬೈಲ್ ಫೋನ್‌ನಲ್ಲಿ ವಿಡಿಯೋಗಳನ್ನು ನೋಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡು ಬಾಲಕಿ ಸಾವನ್ನಪ್ಪಿದ್ದಳು.
ಇದನ್ನೂ ನೋಡಿ:ಇದ್ದಕ್ಕಿದ್ದಂತೆ ಜೇಬಿನಲ್ಲಿಟ್ಟಿದ್ದ ಮೊಬೈಲ್ ಸ್ಫೋಟ