ನಾನು ಕಾಂಗ್ರೆಸ್ ಸೇರುತ್ತೇನೆಂಬುದು ಕೇವಲ ಮಾಧ್ಯಮದವರ ಸೃಷ್ಟಿ: ಶಾಸಕ ಶಿವರಾಮ್ ಹೆಬ್ಬಾರ್ - etv bharat kannada
Published : Sep 25, 2023, 5:45 PM IST
ಶಿರಸಿ(ಉತ್ತರ ಕನ್ನಡ): ನಾನು ಕಾಂಗ್ರೆಸ್ ಸೇರುತ್ತೇನೆಂದು ಮಾಧ್ಯಮದವರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಶಿರಸಿ ತಾಲೂಕಿನ ಬನವಾಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ಬಿಜೆಪಿಯಲ್ಲಿದ್ದೇನೆ. ಇದೆಲ್ಲವನ್ನು ಮಾಧ್ಯಮದವರು ಸೃಷ್ಟಿ ಮಾಡುತ್ತಿದ್ದಾರೆ, ಮಾಡಲಿ. ಸಚಿವ ಮಂಕಾಳು ವೈದ್ಯ ಕಾಂಗ್ರೆಸ್ ಬಾಗಿಲು ತೆರೆದಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಅಭಿನಂದನೆಗಳು ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಕೇವಲ ಮಾತಿನಲ್ಲಿ ಮೈತ್ರಿ ವಿಚಾರ ಪ್ರಸ್ತಾವಾಗಿದೆ. ಈ ಕುರಿತು ಎರಡು ಪಕ್ಷಗಳು ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿಲ್ಲ. ಅಧಿಕೃತ ಘೋಷಣೆಯಾದ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಈ ಹಿಂದೆ ಮನಮೋಹನ್ ಸಿಂಗ್, ಹೆಚ್ ಡಿ ದೇವೇಗೌಡರು ಕೂಡ ಇದರ ಪ್ರಸ್ತಾಪ ಮಾಡಿದ್ದರು. ಆದರೆ ಸ್ಪಷ್ಟ ಬಹುಮತ ಸಿಗದೆ ಅದು ಜಾರಿಗೆ ಬಂದಿರಲಿಲ್ಲ. ಬಹಳ ವರ್ಷಗಳಿಂದ ಆಗಬೇಕಾಗಿದ್ದ ಮಹಿಳಾ ಮೀಸಲಾತಿ ಪ್ರಕ್ರಿಯೆ ಇದೀಗ ಜಾರಿಗೆ ಬಂದಿದೆ. ಲೋಕಸಭೆಯಲ್ಲಿ ಎಲ್ಲಾ ಪಕ್ಷಗಳು ಮಹಿಳಾ ಮೀಸಲಾತಿಗೆ ಸಾಥ್ ನೀಡಿದ್ದಾರೆ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಜಿ.ಪಂ-ತಾ.ಪಂಗೆ ಮೀಸಲಾತಿ ಜಾರಿಯಾಗಿತ್ತು. ಇದೀಗ ಲೋಕಸಭೆ-ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಿದೆ. ಶೇ.50ಕ್ಕೂ ಹೆಚ್ಚು ಮತದಾರರಿರುವ ಮಹಿಳಾ ಸಮುದಾಯಕ್ಕೆ ಇದರ ಉಪಯೋಗವಾಗಬೇಕು ಎಂದು ಹೇಳಿದರು.