ಆಪರೇಷನ್ ಕಲಿಸಿದವರೇ ಬಿಜೆಪಿಯವರು: ಶಾಸಕ ಪುಟ್ಟರಂಗಶೆಟ್ಟಿ - etv bharat kannada
Published : Aug 23, 2023, 8:25 PM IST
ಚಾಮರಾಜನಗರ: ರಾಜಕೀಯವನ್ನು ಕಲುಷಿತ ಮಾಡಿದವರೇ ಬಿಜೆಪಿಯವರು. ಅಧಿಕಾರಕ್ಕಾಗಿ ಎಲ್ಲೆಲ್ಲೋ ಇದ್ದವರನ್ನು ಹಿಡಿದಿಟ್ಟುಕೊಂಡಿದ್ದೇಕೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ರಾಜಕೀಯವನ್ನು ಹೊಲಸೆಬ್ಬಿಸಿದವರೇ ಬಿಜೆಪಿಯವರು, ಅದೇ ಅವರಿಗೆ ಈಗ ತಿರುಗುಬಾಣವಾಗಿದೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು. ಆಪರೇಷನ್ ಮಾಡೋದನ್ನು ಕಲಿಸಿದವರೇ ಬಿಜೆಪಿಯವರು ಎಂದರು.
ಇದೇ ವೇಳೆ ಕಾಂಗ್ರೆಸ್ನ 40 ಶಾಸಕರು ಬಿಜೆಪಿ ಸೇರ್ತಾರೆ ಎಂಬ ಮಾಜಿ ಶಾಸಕ ಅಮೃತ ದೇಸಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ತಲೆ ಕೆಟ್ಟವರು ಹೇಳಿರ್ಬೇಕು, ನಮ್ಮ ಸರ್ಕಾರ ಬಂದು ಕೇವಲ ಮೂರು ತಿಂಗಳಾಗಿದೆ, ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ, ಇಂತಹ ಒಂದೇ ಒಂದು ಕಾರ್ಯಕ್ರಮ ತರಲಿಲ್ಲ ಅವ್ರು ಎಂದು ಟೀಕಿಸಿದರು.
ಇನ್ನು, ಕಾಂಗ್ರೆಸ್ಗೆ ಬರುತ್ತಿರುವ ಶಾಸಕರಿಗೆ ಸ್ಥಾನಮಾನ ಸಿಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಈಗಲೇ 136 ಜನ ಇದೀವಿ, ಯಾರನ್ನೂ ಕರೆಯುವ ಪ್ರಮೆಯವೇ ಇಲ್ಲ ಎಂದು ಹೇಳಿದರು.