ಕಾಂಗ್ರೆಸ್ ಅಭ್ಯರ್ಥಿ ಗೆಲುವು: ಅಭಿಮಾನಿಗಳಿಂದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ - ಶಾಸಕ ಮಂಥರ್ ಗೌಡ
ಮಡಿಕೇರಿ: 25 ವರ್ಷಗಳ ಬಿಜೆಪಿ ಆಡಳಿತ ಕೊನೆಯಾಗಿ ಸೋಮವಾರ ಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಜಯ ಗಳಿಸಿದರೆ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತೇವೆ ಎಂದು ಕುಶಾಲನಗರ ಕೆಲವು ಯುವಕರು ಹರಿಕೆ ಹೊತ್ತಿದ್ದರು. ಬಿಜೆಪಿ ಭದ್ರ ಕೋಟೆಯನ್ನು ಛಿದ್ರ ಮಾಡಿ ಕಾಂಗ್ರೆಸ್ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಕುಶಾಲನಗರ ತಾಲೂಕಿನ ಕೂಡಮಂಗಳೂರು ಗ್ರಾಮದ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಶಾಸಕ ಮಂಥರ್ ಗೌಡ ಅವರಿಗೆ ಶುಭಕೋರಿ ಕಳುಹಿಸಿ ಕೊಟ್ಟಿದ್ದಾರೆ.
ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಿಂದ ಪಾದಯಾತ್ರೆ ಆರಂಭಗೊಂಡು ಚಾಮುಂಡಿ ಬೆಟ್ಟದಲ್ಲಿ ಕೊನೆಯಾಗಲಿದೆ. ಈ ಪಾದಯಾತ್ರೆಯಲ್ಲಿ ಸಂತೋಷ್, ಅರುಣ್ ಹಾಗೂ ಮಾದಪ್ಪ ಎಂಬ ಯುವಕರು ಪಾಲ್ಗೊಂಡಿದ್ದಾರೆ. ಎರಡು ದಿನಗಳು ನಡೆಯಲಿರುವ ಈ ಪಾದಯಾತ್ರೆಯ ದಾರಿ 135 ಕಿ.ಮೀ ಆಗಿರಲಿದೆ. ಶುಕ್ರವಾರ ಮೈಸೂರಿಗೆ ಯುವಕರು ತಲುಪಲಿದ್ದಾರೆ. ನಂತರ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಮಂಥರ್ ಗೌಡ 83,949 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ 79,429 ಮತಗಳನ್ನು ಪಡೆದಿದ್ದರು.
ಇದನ್ನೂ ಓದಿ:ಚುನಾವಣಾ ಕಣದಲ್ಲಿ ಅಪ್ಪ-ಮಕ್ಕಳು: ಮತದಾರ ಮಣೆ ಹಾಕಿದ್ದು ಯಾರಿಗೆ?