ಶಿವಮೊಗ್ಗ: ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು - ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ - ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ
ಶಿವಮೊಗ್ಗ : 18 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ತಡರಾತ್ರಿ ಧ್ವಂಸಗೊಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೈಕ್ನಲ್ಲಿ ಬಂದ ಕಿಡಿಗೇಡಿಗಳಿಬ್ಬರು ಕೃತ್ಯ ಎಸಗಿದ್ದು, ಗಾಂಧಿ ವೃತ್ತದ ಮುಂಭಾಗದ ಅಂಗಡಿಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ರಸ್ತೆ ತಡೆದು ಪ್ರತಿಭಟನೆ : ಗಾಂಧಿ ಪ್ರತಿಮೆ ಧ್ವಂಸ ಮಾಡಿದ ವಿಚಾರ ಪಟ್ಟಣದ ತುಂಬೆಲ್ಲಾ ಹರಡುತ್ತಿದ್ದಂತೆ ಪಕ್ಷಾತೀತವಾಗಿ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ಬಸ್ ಸೇರಿದಂತೆ ಇತರ ಎಲ್ಲಾ ವಾಹನಗಳನ್ನು ತಡೆದು ಆಕ್ರೋಶ ಹೊರ ಹಾಕುವ ಮೂಲಕ ಆರೋಪಿಗಳ ಬಂಧನಕ್ಕೆ ಆಗ್ರಹಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿದ್ದು, ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಜೊತೆಗೆ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ ಹಾಗೂ ಎಸ್ಪಿ ಕೂಡ ಭೇಟಿ ನೀಡಿದ್ದಾರೆ. ಹಾಗೆಯೇ, ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಮುಖ ಸರಿಯಾಗಿ ಗೋಚರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ, ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ : ಸಚಿವ ಸುಧಾಕರ್