ಹೊಸಕೋಟೆ: ಪ್ರಸಾದ ಸೇವಿಸಿ ಹಲವರು ಅಸ್ವಸ್ಥ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಸಚಿವ ಮುನಿಯಪ್ಪ - 200ಕ್ಕೂ ಹೆಚ್ಚು ಜನ ಅಸ್ವಸ್ಥ
Published : Dec 26, 2023, 9:57 PM IST
ಹೊಸಕೋಟೆ: ವೈಕುಂಠ ಏಕಾದಶಿ ಮತ್ತು ಹನುಮ ಜಯಂತಿಯಂದು ನಗರದ ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿ 200ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಅನಾರೋಗ್ಯಪೀಡಿತ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಚ್.ಮುನಿಯಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಹೊಸಕೋಟೆ ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಹೋಗಿದ್ದ ಭಕ್ತರು ಪುಲಿಯೊಗರೆ, ಪಾಯಸ , ಲಡ್ಡು ಸೇವಿಸಿದ್ದರು. ನಂತರ ವಾಂತಿಭೇದಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಜನರನ್ನು ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಸಿದ್ದಗಂಗಮ್ಮ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಸಚಿವ ಮುನಿಯಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, "ಪ್ರಸಾದ ತಿಂದು ಅಸ್ವಸ್ಥರಾಗಿದ್ದ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ವತ್ರೆಗೆ ದಾಖಲಾದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈಗಾಗಲೇ ನಾನು ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಅವರು ಚಿಕಿತ್ಸಾ ವೆಚ್ಚ ಕೊಡುವುದಾಗಿ ಹೇಳಿದ್ದಾರೆ. ಯಾರೂ ಸಹ ಗಾಬರಿಪಡುವ ಅವಶ್ಯಕತೆಯಿಲ್ಲ. ಯಾವ ಕಾರಣದಿಂದ ಈ ರೀತಿ ಆಯ್ತು ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ" ಎಂದರು.
ಇದನ್ನೂಓದಿ:ಕೋವಿಡ್ ಸೋಂಕಿತರಿಗೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ; ಹೊಸ ವರ್ಷಕ್ಕೆ ಯಾವುದೇ ನಿರ್ಬಂಧವಿಲ್ಲ