ಮೈಸೂರು: ಸ್ವಾತಂತ್ರ್ಯೋತ್ಸವ ಭಾಷಣ ವೇಳೆ ಸುಸ್ತಾಗಿ ಕುಳಿತ ಸಚಿವ ಮಹದೇವಪ್ಪ - ಭಾಷಣದ ವೇಳೆ ಸುಸ್ತಾದ ಸಚಿವ ಮಹದೇವಪ್ಪ
ಮೈಸೂರು:ನಗರದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಇಂದು ಜಿಲ್ಲಾಡಳಿತ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸುಸ್ತಾಗಿ ಕೆಲಸಮಯ ಕುಳಿತುಕೊಂಡರು. ಬಳಿಕ ನೀರು ಕುಡಿದು ಚೇತರಿಸಿಕೊಂಡರು.
ಧ್ವಜಾರೋಹಣದ ನಂತರ ಪರೇಡ್ ವೀಕ್ಷಿಸಿದ ಸಚಿವರು, ಭಾಷಣ ಮಾಡಲು ವೇದಿಕೆಗೆ ಆಗಮಿಸಿದ್ದರು. ಭಾಷಣ ಮಾಡುತ್ತಿದ್ದಂತೆ ಸುಸ್ತಾದರು. ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತು, ಬೆವರೊರೆಸಿಕೊಂಡು ನೀರು ಕುಡಿದು ಮತ್ತೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸ್ವಾತಂತ್ರ್ಯದ ಶುಭ ಕೋರಿದ ಸಚಿವರು, "ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ ಸೇರಿದಂತೆ 5 ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಇವು ಬಡಜನರ ಬದುಕಿಗೆ ಸಹಾಯಕವಾಗಿವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ತವರು ಜಿಲ್ಲೆಗೂ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಮೈಸೂರಿನ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟಕ್ಕೆ ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ, ಚಿತ್ರನಗರಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಿದ್ದಾರೆ" ಎಂದು ತಮ್ಮ ಭಾಷಣದಲ್ಲಿ ಸಚಿವರು ವಿವರಿಸಿದರು.