ಕಾವೇರಿ ನೀರು ವಿವಾದ : ಬಿಜೆಪಿ, ಜೆಡಿಎಸ್ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ - ಈಟಿವಿ ಭಾರತ ಕನ್ನಡ
ಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ವಿಚಾರವಾಗಿ ಇಂದು ಸಂಸದೆ ಸುಮಾಲತಾ ಅಂಬರೀಶ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿರುವುದಕ್ಕೆ ಸಚಿವ ಚಲುವರಾಯಸ್ವಾಮಿ ಚಾಟಿ ಬೀಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನೀರು ನಿರ್ವಹಣ ಮಂಡಳಿ ಇರೋದು ಕೇಂದ್ರ ಸರ್ಕಾರದ ಬಳಿ. ಕೇಂದ್ರದಲ್ಲಿ ಇರೋದು ಬಿಜೆಪಿ. ನೀರು ಬಿಡುವ ತೀರ್ಮಾನ ಮಾಡಬೇಕಾಗಿದ್ದು ಬಿಜೆಪಿಯೇ. ನಾವು ಕೇಂದ್ರ ಸರ್ಕಾರದ ಬಳಿ ನೀರು ನಮಗೆ ಬೇಕು ಅಂತಾ ಅರ್ಜಿ ಹಾಕಿಕೊಂಡಿದ್ದೇವೆ. ನಾವು ಸಮರ್ಥವಾಗಿ ವಾದ ಮಾಡಿರೋದಕ್ಕೆ ತಮಿಳುನಾಡು ಕೋರ್ಟ್‌ಗೆ ಹೋಗಿರೋದು. ನೀರು ನಿರ್ವಹಣಾ ಮಂಡಳಿ 10 ಸಾವಿರ ಕ್ಯೂಸೆಕ್ ಬಿಡಲು ಹೇಳಿದೆ. ಸುಮಲತಾ ಅವರು ಬಿಜೆಪಿಗೆ ಬೆಂಬಲ ಕೊಟ್ಟಿರೋದಕ್ಕೆ ಮಾತಡಲ್ಲ. ಅವರು ಮಂಡ್ಯ ಜಿಲ್ಲೆಯಲ್ಲಿ ಗೆದ್ದಿದ್ದಾರೆ, ಕೇಂದ್ರದ ಬಳಿ ಮಾತನಾಡಿ ಸರಿಪಡಿಸಬೇಕು. ಅದನ್ನು ಬಿಟ್ಟು ಇಲ್ಲಿ ನಮ್ಮ ವಿರೋಧ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಬಳಿಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ, ಅಧಿಕಾರ ನೋಡಿ ಮಳೆ ಬರಲ್ಲ. ಸಿದ್ದರಾಮಯ್ಯ ಇದ್ದಾಗಲೂ ಮಳೆ ಬಂದಿದೆ, ಬರವೂ ಬಂದಿದೆ. ಕುಮಾರಸ್ವಾಮಿ ಇದ್ದಾಗಲೂ ಮಳೆಯೂ ಬಂದಿದೆ, ಬರ ಬಂದಿದೆ. ಯಡಿಯೂರಪ್ಪ ಅವರು ಇದ್ದಾಗಲೂ ಎರಡು ಆಗಿದೆ. ಮಳೆ ಅಧಿಕಾರದಲ್ಲಿ ಕೂತಿರುವವರ ಅದೃಷ್ಟ ನೋಡಿಕೊಂಡು ಬರಲ್ಲ ಎಂದು ತಿರುಗೇಟು ನೀಡಿದರು.
ಇನ್ನೂ ಇದೇ ಸಂದರ್ಭದಲ್ಲಿ ಆಪರೇಷನ್ ಹಸ್ತಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿಎಸ್ ಪುಟ್ಟರಾಜುಗೆ ಕಾಂಗ್ರೆಸ್ ನಿಂದ ಗಾಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈಗ ಯಾರ ಹೆಸರನ್ನು ಹೇಳಲ್ಲ, ವಾಲೆಂಟರಿಯಾಗಿ ಪಕ್ಷಕ್ಕೆ ಬಂದ್ರೆ ಸ್ವಾಗತ. ಕಾಂಗ್ರೆಸ್ನಲ್ಲಿ 135+1, 136 ಸೀಟಿದೆ. ಗೌರಿಬಿದನೂರು, ಹರಪನಹಳ್ಳಿ ಶಾಸಕರು ಕಾಂಗ್ರೆಸ್ ಪರವಿದ್ದಾರೆ. ನಮಗೆ ಆಡಳಿತ ನಡೆಸಲು ಯಾರ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಸಿದ್ಧಾಂತದಂತೆ ನಡೆದುಕೊಂಡ್ರೆ ಸಂಪರ್ಕ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.
ಅದ್ಧೂರಿಯಾಗಿ ದಸರಾ ಆಚರಿಸಲು ಚರ್ಚೆ:ಮೊದಲ ದಸರಾವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲು ಮಂಡ್ಯ ಜಿಲ್ಲೆ ಶಾಸಕರು ತೀರ್ಮಾನಿಸಿದ್ದಾರೆ. ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಶ್ರೀರಂಗಪಟ್ಟಣ ದಸರಾದ ಪೂರ್ವ ಭಾವಿ ಸಭೆಯೂ ಇಂದು ನಡೆಯಿತು. ಸಭೆಯಲ್ಲಿ ದಸರಾ ಮಹೋತ್ಸವ ಸಂಬಂಧ ಹಲವು ವಿಚಾರಗಳನ್ನ ಚರ್ಚೆ ಮಾಡಲಾಯ್ತು. ಅದ್ಧೂರಿಯಾಗಿ ದಸರಾ ಆಚರಿಸುವ ಜೊತೆಗೆ ಜಿಲ್ಲೆಯ ತಾಲೂಕುಗಳಲ್ಲಿ ದಸರಾ ಚಟುವಟಿಕೆ ಕಾರ್ಯಕ್ರಮ ಆಯೋಜನೆ, ವಿದ್ಯುತ್ ದೀಪಾಲಂಕಾರ ಮಾಡಲು ನಿರ್ಧಾರ ಕೈಗೊಳ್ಳಲಾಯ್ತು.
ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ