ಆಪರೇಷನ್ ಎಂಬ ಕೆಟ್ಟ ಶಬ್ಧ ತಂದಿದ್ದು ಬಿಜೆಪಿಯವರು: ಸಚಿವ ಬೋಸರಾಜು - etv bharat kannada
Published : Aug 28, 2023, 7:36 PM IST
ಕೊಡಗು: "ಆಪರೇಷನ್ ಎಂಬ ಕೆಟ್ಟ ಶಬ್ಧ ತಂದಿದ್ದು ಬಿಜೆಪಿಯವರು. ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಆರಿಸಿ ಬಂದ ಸರ್ಕಾರಗಳಿಗೆ ಆಪರೇಷನ್ ಕಮಲ ಮಾಡಿದ್ದು ಬಿಜೆಪಿಯವರು" ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು. ಮಡಿಕೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು," ಕೇವಲ ಒಂದು ರಾಜ್ಯದಲ್ಲಿ ಮಾತ್ರ ಮಾಡಿದ್ದರೆ ಕರ್ನಾಟಕದ ಬಿಜೆಪಿ ನಾಯಕರು ಮಾಡಿದರು ಎನ್ನಬಹುದು. ಇಡೀ ರಾಷ್ಟ್ರದಲ್ಲಿ ಮಾಡಿದರೆ ಅದಕ್ಕೆ ಕೇಂದ್ರದ ನಾಯಕರೇ ಅವಕಾಶ ಕೊಟ್ಟಿದ್ದಾರೆ ಎಂದರ್ಥ, ಇದನ್ನು ನಾವು ನೋಡುತ್ತಿದ್ದೇವೆ" ಎಂದರು.
"ಕಾಂಗ್ರೆಸ್ನ ಇತಿಹಾಸದಲ್ಲಿ ನಾವು ಎಂದೂ ಈ ರೀತಿಯಾಗಿ ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ಮಾಡಿರಲಿಲ್ಲ. ಮುಂದೆಯೂ ಮಾಡುವುದಿಲ್ಲ. ಪಕ್ಷಕ್ಕೆ ಬರುವಂತವರು ಆಯಾ ಜಿಲ್ಲೆಯ ಮುಖಂಡರಿಗೆ ಕೇಳುತ್ತಿದ್ದಾರೆ. ಪಕ್ಷಕ್ಕೆ ಬರುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿರುವವರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ಎಂದು ಕೇಳುತ್ತಿದ್ದಾರೆ. ಎಲ್ಲವನ್ನು ನೋಡಿ, ಸಮತೋಲನ ಮಾಡಿ ರಾಜಕೀಯವಾಗಿ ಯಾವುದೇ ತೊಂದರೆಯಾಗದಂತೆ, ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ, ಮುಂಬರುವ ಚುನಾವಣೆಗಳಿಗೆ ಅನುಕೂಲವಾಗುವಂತೆ ಮತ್ತು ಯಾರು ಬರುತ್ತಾರೆ. ಅವರಿಗೆ ಗೌರವ ಸಿಗುವಂತೆ ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆ ಪ್ರಯತ್ನ ಮಾಡುತ್ತಿದ್ದಾರೆ. ಎಷ್ಟು ಜನ ಕಾಂಗ್ರೆಸ್ಗೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಹೊಸ ಹೊಸ ವ್ಯಕ್ತಿಗಳು ಪಕ್ಷಕ್ಕೆ ಬರುತ್ತಿದ್ದಾರೆ" ಎಂದು ಹೇಳಿದರು.
ಇನ್ನು, ಕೆಎಸ್ಆರ್ಟಿಸಿ ಡಿಕ್ಕಿಯಾಗಿದ್ದರಿಂದ ಹಾನಿಗೊಳಗಾಗಿರುವ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ಸಚಿವ ಬೋಸರಾಜು ಪರಿಶೀಲನೆ ನಡೆಸಿ ಶಾಸಕರಿಂದ ಮಾಹಿತಿ ಪಡೆದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ ಸೋಲುವ ಭಯಕ್ಕೆ ಕಾಂಗ್ರೆಸ್‌ನಿಂದ 'ಆಪರೇಷನ್ ಹಸ್ತ' ಸೃಷ್ಟಿ: ಯತ್ನಾಳ್