ಸಚಿನ್ ತೆಂಡೂಲ್ಕರ್ ಮನೆ ಮುಂದೆ ಶಾಸಕ ಬಚ್ಚು ಕಡು ಪ್ರತಿಭಟನೆ! - ಸಚಿನ್ ತೆಂಡೂಲ್ಕರ್ ಮನೆ ಮುಂದೆ ಪ್ರತಿಭಟನೆ
Published : Aug 31, 2023, 1:44 PM IST
ಮುಂಬೈ( ಮಹಾರಾಷ್ಟ್ರ): ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್ಗಳ ಪ್ರಚಾರ ಮಾಡುವ ಜಾಹೀರಾತಿನಲ್ಲಿ ನಟಿಸುತ್ತಿರುವುದನ್ನು ಖಂಡಿಸಿ ಪ್ರಹಾರ್ ಸಂಘಟನೆಯ ಅಧ್ಯಕ್ಷ ಹಾಗೂ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದರು. ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಈ ಜಾಹೀರಾತುಗಳಿಂದ ಯುವಕರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ತಕ್ಷಣ ಈ ಜಾಹೀರಾತಿನಿಂದ ಹೊರಬರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಅವರ ಮನೆ ಮುಂದೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಆನ್‌ಲೈನ್ ಗೇಮ್ಗಳಿಂದಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಇದು ಹೆಚ್ಚಾಗುವ ಸಂಭವವಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು ತೆಂಡೂಲ್ಕರ್ ಇಂತಹ ಜಾಹೀರಾತುಗಳಿಂದ ತಕ್ಷಣ ಹಿಂದಕ್ಕೆ ಬರಬೇಕು. ಬರದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಶಾಸಕ ಬಚ್ಚು ಕಾಡು ಎಚ್ಚರಿಕೆ ನೀಡಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಬಚ್ಚು ಕಡು ಹಾಗೂ ಅವರ ಕಾರ್ಯಕರ್ತರ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.