ಮುಂಬೈ ಪಂಚತಾರಾ ಟ್ರೈಡೆಂಟ್ ಹೊಟೇಲಿನ ಮೇಲೆ ಬೆಂಕಿ ಇಲ್ಲದ ಹೊಗೆ: ವಿಡಿಯೋ
ಮುಂಬೈ:ಇಲ್ಲಿನ ನಾರಿಮನ್ ಪಾಯಿಂಟ್‌ನಲ್ಲಿರುವ ಪ್ರಸಿದ್ಧ ಬಹುಅಂತಸ್ತಿನ ಟ್ರೈಡೆಂಟ್ ಹೋಟೆಲ್ ಕಟ್ಟಡದಲ್ಲಿ ಇಂದು ಬೆಳಗ್ಗೆ (ಭಾನುವಾರ) ದಟ್ಟ ಹೊಗೆ ಕಾಣಿಸಿಕೊಂಡಿತು. ಇದು ಮೊದಲು ಬೆಂಕಿ ಅವಘಡ ಎಂದೇ ಭಾವಿಸಲಾಗಿತ್ತು. ಆದರೆ, ಪರಿಶೀಲನೆಯ ಬಳಿಕ ಹೋಟೆಲ್ನ ಬಾಯ್ಲರ್ನಿಂದ ಬಂದ ಹೊಗೆಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಟ್ಟಡಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಮುಂಬೈನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಮರೈನ್ ಡ್ರೈವ್ ಪ್ರದೇಶದಲ್ಲಿ ಈ ಹೋಟೆಲ್ ಇದೆ. ಇಲ್ಲಿಗೆ ಅನೇಕ ಪ್ರವಾಸಿಗರು ವಾಯು ವಿಹಾರಕ್ಕೆ ಬರುತ್ತಾರೆ. ಬೆಳಗ್ಗೆ ಹೋಟೆಲ್ನ ಮೇಲಂತಸ್ತಿನ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಂಡ ಜನರು ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕಟ್ಟಡದಲ್ಲಿ ಬೆಂಕಿ ಬಿದ್ದಿದೆ ಎಂದು ಭಾವಿಸಿದ್ದ ಆಡಳಿತ ಮಂಡಳಿ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿ ಕರೆಸಿದ್ದರು.
ತಪಾಸಣೆ ನಡೆಸಿದ ಬಳಿಕ ಇದು ಬೆಂಕಿಯಿಂದ ಬಂದ ಹೊಗೆಯಲ್ಲ, ಬಾಯ್ಲರ್ನಲ್ಲಿನ ನೀರು ಅತಿ ಬಿಸಿಯಾಗಿ ಹೊಗೆ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದರು. ಇದರಿಂದ ಪಂಚತಾರಾ ಹೋಟೆಲ್ನಲ್ಲಿ ಉಂಟಾಗಿದ್ದ ಬೆಂಕಿಯ ಆತಂಕ ದೂರವಾಯಿತು.
ಮುಂಬೈನ ನಾರಿಮನ್ ಪಾಯಿಂಟ್ ಬಹುಮುಖ್ಯ ಪ್ರದೇಶವಾಗಿದ್ದು, ಇಲ್ಲಿ ಸರ್ಕಾರದ ಸಚಿವಾಲಯವಿದೆ. ವಿಧಾನಸೌಧವೂ ಇಲ್ಲೇ ಇದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಿಂದ ಅಧಿಕಾರಿಗಳು, ನೌಕರರು, ಜನಸಾಮಾನ್ಯರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶ ಯಾವಾಗಲೂ ಜನನಿಬಿಡವಾಗಿರುತ್ತದೆ.
ಇದನ್ನೂ ಓದಿ:ಬೆಂಗಳೂರು ಏರ್ಪೋರ್ಟ್ನಲ್ಲಿ ಬಸ್ ಅಪಘಾತ: 15 ಮಂದಿ ಪ್ರಯಾಣಿಕರಿಗೆ ಗಾಯ