ಅಮರ್ ರಹೇ ಪ್ರಾಂಜಲ್.. ಪಂಚಭೂತಗಳಲ್ಲಿ ಲೀನರಾದ ಕರುನಾಡಿನ ವೀರ ಯೋಧ - ಅಮರ್ ರಹೇ ಪ್ರಾಂಜಲ್
Published : Nov 25, 2023, 5:55 PM IST
ಬೆಂಗಳೂರು:ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಇಂದು ಮಧ್ಯಾಹ್ನ ನೆರವೇರಿತು. ಸಾವಿರಾರು ಜನರ ಅಶ್ರುತರ್ಪಣದ ನಡುವೆ ವೀರ ಸೇನಾನಿ ಪ್ರಾಂಜಲ್ ಪಂಚಭೂತಗಳಲ್ಲಿ ಲೀನರಾದರು.
ಶನಿವಾರ ಬೆಳಗ್ಗೆಯಿಂದ ಪ್ರಾಂಜಲ್ ಅವರ ನಿವಾಸ, ಜಿಗಣಿಯ ನಂದನವನದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ನಡೆಯಿತು. ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಸ್ಥರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಯೋಧನಿಗೆ ನಮಿಸಿದರು. ಭಾರತ್ ಮಾತಾಕಿ ಜೈ, ವಂದೇ ಮಾತರಂ, ಅಮರ್ ರಹೇ ಪ್ರಾಂಜಲ್ ಎಂಬ ಘೋಷಣೆಗಳು ಮೊಳಗಿದವು.
ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಗೌರವ ವಂದನೆ ಸಲ್ಲಿಸಿದ ಬಳಿಕ ಪಾರ್ಥೀವ ಶರೀರವನ್ನು ಪ್ರಾಂಜಲ್ ಮನೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ಮಿಲಿಟರಿ ವಾಹನದ ಮೂಲಕ ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು. ಮಧ್ಯಾಹ್ನ ಕೂಡ್ಲು ಮೂಲಕ ಮೆರವಣಿಗೆ ಸಾಗಿದ್ದು, ಸೋಮಸುಂದರಪಾಳ್ಯದಲ್ಲಿನ ವಿದ್ಯುತ್ ಚಿತಾಗಾರದಲ್ಲಿ ಪ್ರಾಂಜಲ್ ಅವರ ಅಂತ್ಯಕ್ರಿಯೆ ನೆರವೇರಿತು. ಪ್ರಾಂಜಲ್ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ ವೆಂಕಟೇಶ್ ಅವರ ಏಕೈಕ ಪುತ್ರರಾಗಿದ್ದರು.