ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ; ಚಾಮರಾಜನಗರ ಗಡಿಯಲ್ಲೊಂದು ಭಾವೈಕ್ಯತೆ - ETV Bharat kannada News
ಚಾಮರಾಜನಗರ :ಅಪ್ಪಟ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ ಇಂದು ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಳವಾಡಿ ಗ್ರಾಮದಲ್ಲಿ ಮಾರಮ್ಮನ ಜಾತ್ರೋತ್ಸವದ ಪ್ರಯುಕ್ತ ಮಸೀದಿ ಮುಂಭಾಗದಲ್ಲೇ ಆಚರಣೆ ನೆರವೇರಿತು. ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ತಾಳವಾಡಿ ಸಾಕ್ಷಿಯಾಗಿದೆ.
ಸುಮಾರು 150 ವರ್ಷಗಳಿಂದ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಫಿರ್ಕಾದ 58 ಗ್ರಾಮಗಳೂ ಒಳಗೊಂಡಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಮುಖ್ಯ ಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ಗುಡಿಯೂ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಜಾತ್ರೆಯ ವಿಶೇಷತೆ. ಜಾತ್ರೆಯಲ್ಲಿ ಜಾನಪದ ಕಲೆಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು. ಮೆರವಣಿಯಲ್ಲಿ ಜನಸಾಗರವೇ ಕಂಡುಬಂತು.
ಇದನ್ನೂ ಓದಿ:ಉಘೇ ಮಾದಪ್ಪ ಈಗ ಇನ್ನಷ್ಟು ಶ್ರೀಮಂತ.. ಮಹದೇಶ್ವರನಿಗೆ ಹರಿದುಬಂತು ಕೋಟಿ ಕೋಟಿ ಹಣ