ಡ್ರೈವರ್ ಅಜಾಗರೂಕತೆಯ ಚಾಲನೆಗೆ ಡಿವೈಡರ್ ದಾಟಿ ಬಂದ ಟ್ರಕ್ : ವಿಡಿಯೋ - ಹೆಜಮಾಡಿ ಕಡೆಯಿಂದ ಮಂಗಳೂರು
Published : Dec 7, 2023, 5:22 PM IST
ಮಂಗಳೂರು :ಲಾರಿಯೊಂದು ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಗೆ ನುಗ್ಗಿ ಬಂದ ಪರಿಣಾಮ ಸರಣಿ ಅಪಘಾತ ನಡೆದಿರುವ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ಇಂದು ಸಂಭವಿಸಿದೆ. ಬೆಳಗ್ಗೆ 9.30ರ ಸುಮಾರಿಗೆ ಟ್ರಕ್ ಚಾಲಕ ಧಾರವಾಡದ ಮಂಜುನಾಥ ತನ್ನ ವಾಹನವನ್ನು ಹೆಜಮಾಡಿ ಕಡೆಯಿಂದ ಮಂಗಳೂರು ಕಡೆಗೆ ಅತಿ ವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಮುಲ್ಕಿ ಜಂಕ್ಷನ್ ಬಳಿ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆಯ ಬದಿಯ ಡಿವೈಡರ್ ದಾಟಿ ಸರ್ವಿಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಪುನಃ ಡಿವೈಡರ್ ದಾಟಿ ಮುಖ್ಯ ರಸ್ತೆಗೆ ಬಂದು ಟ್ರಕ್ ನಿಂತಿದೆ. ಅಪಘಾತದ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರ ಬಪ್ಪನಾಡು ದೇವಸ್ಥಾನದ ಬಳಿಯ ನೇಚರ್ ಟೆಂಪಲ್ ಅಪಾರ್ಟ್ಮೆಂಟ್ನಲ್ಲಿ ವಾಚ್ಮನ್ ಆಗಿರುವ ಸಂಗಪ್ಪ (45) ಅವರಿಗೆ ಗಂಭೀರ ಗಾಯವಾಗಿದ್ದು, ಜೊತೆಗಿದ್ದ ಮಗಳು ಸವಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಟೋ ಚಾಲಕ ಧರ್ಮೇಂದ್ರ ಹಾಗೂ ಮುಲ್ಕಿ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಉತ್ತರ ಪೊಲೀಸ್ ಠಾಣೆಯ ಗೀತಾ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಟ್ರಕ್ ಅನ್ನು ವಶಕ್ಕೆ ಪಡೆದು ಚಾಲಕ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿ ಚಿಗರಿ ಬಸ್‌ನಲ್ಲಿ ಬೆಂಕಿ: 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು