ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಬಜರಂಗದಳ ಪ್ರತಿಭಟನೆ - ಮಂಗಳೂರು
ಮಂಗಳೂರು:ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ರಾತ್ರಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸೇರಿದ ಅವರು, ಪ್ರಣಾಳಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ (ನಿನ್ನೆ) ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಪಿಎಫ್ಐ ಮಾದರಿಯಲ್ಲಿ ಬಜರಂಗದಳವನ್ನೂ ನಿಷೇಧಿಸುವುದಾಗಿ ಘೋಷಿಸಿದೆ. ಈ ಪ್ರಸ್ತಾಪಕ್ಕೆ ಬಿಜೆಪಿ ಕೂಡ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. "ಕಾಂಗ್ರೆಸ್ನದ್ದು ಹಾಸ್ಯಾಸ್ಪದ ಪ್ರಣಾಳಿಕೆ ಎಂದದ್ದಕ್ಕೆ ಹಲವು ಕಾರಣಗಳಿವೆ. ಕಾಂಗ್ರೆಸ್ ಸರ್ಕಾರ ಮುಚ್ಚಿದ್ದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಡಬಲ್ ಇಂಜಿನ್ ಸರ್ಕಾರ ಪುನರಾರಂಭಿಸಿದ್ದೂ ಆಗಿದೆ. ಅಲ್ಲಿ ಕಬ್ಬು ಅರೆಯುವಿಕೆ ಶುರುವಾಗಿದ್ದೂ ಆಗಿದೆ. ಎಲ್ಲವೂ ಮುಗಿದ ಮೇಲೆ ಇದೇನಿದು ಹೊಸ ರಾಗ"? ಎಂದು ಟೀಕಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಕಾಂಗ್ರೆಸ್‌ನ ಪ್ರಮುಖ ಗ್ಯಾರಂಟಿ ಯೋಜನೆಗಳೊಂದಿಗೆ ವಿವಿಧ ವರ್ಗಗಳಿಗೆ ವಿಶೇಷ ಯೋಜನೆಗಳ ಭರವಸೆ ನೀಡಲಾಗಿದೆ. ಹಲವು ಕ್ಷೇತ್ರಗಳ ಅಭಿವೃದ್ಧಿಗೂ ಪ್ರಣಾಳಿಕೆಯಲ್ಲಿ ಗಮನಹರಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೇನು? ಇಲ್ಲಿದೆ ಫುಲ್ ಡಿಟೇಲ್ಸ್