ಸಿನಿಮಾ ದೃಶ್ಯದಂತೆ ಚಲಿಸುತ್ತಿರುವ ಕಾರಿನಿಂದ ಹಣ ಎಸೆದ ಯುವಕ: ವಿಡಿಯೋ
ಗುರುಗ್ರಾಮ (ಹರಿಯಾಣ):ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ನೋಟು ಎಸೆದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಈಚೆಗೆ ಬಂಧಿಸಿದ್ದರು. ಇಂಥದ್ದೇ ಘಟನೆ ಈಗ ಹರಿಯಾಣದಲ್ಲಿ ನಡೆದಿದೆ. ಚಲಿಸುತ್ತಿರುವ ಕಾರಿನ ಹಿಂದಿನಿಂದ ಯುವಕನೋರ್ವ ಹಣದ ನೋಟುಗಳನ್ನು ಎಸೆಯುತ್ತಿರುವುದು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಸಿನಿಮಾವೊಂದರಿಂದ ಸ್ಫೂರ್ತಿ ಪಡೆದ ಇಬ್ಬರು ಯುವಕರು ಕಾರು ಚಲಾಯಿಸುತ್ತಾ ನೋಟುಗಳನ್ನು ಹಿಂದಿನಿಂದ ಬಿಸಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿಯೂ ಹಂಚಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಆರೋಪಿಗಳಾದ ಜೋರಾವರ್ ಸಿಂಗ್ ಕಲ್ಸಿ ಮತ್ತು ಗುರುಪ್ರೀತ್ ಸಿಂಗ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಅವರು, ಸಿನಿಮಾವೊಂದರ ದೃಶ್ಯವನ್ನು ಮರುಸೃಷ್ಟಿ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಬಾಯ್ಬಿಟ್ಟಿದ್ದಾರೆ. ರಸ್ತೆಗೆ ನೋಟುಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಉದ್ಧಟತನ ಮೆರೆದ ಯುವಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದೆಡೆ ಉತ್ತರಪ್ರದೇಶದಲ್ಲಿ ಈಚೆಗೆ ಮದುವೆ ಸಮಾರಂಭದಲ್ಲಿ ನೋಟುಗಳನ್ನು ಕಟ್ಟಡದಿಂದ ಎಸೆಯಲಾಗಿತ್ತು. ಹತ್ತು, ಇಪ್ಪತ್ತು, ನೂರು ರೂಪಾಯಿ ನೋಟುಗಳನ್ನು ಮದುವೆ ಮನೆಯಲ್ಲಿ ಚೆಲ್ಲಾಡಿದ ವಿಡಯೋ ವೈರಲ್ ಆಗಿತ್ತು.
ಇದನ್ನೂ ಓದಿ:ಫೇಮಸ್ ಆಗಲು ಕಂತೆ-ಕಂತೆ ನೋಟು ಎಸೆದು ಪೊಲೀಸರ ಅತಿಥಿಯಾದ ಯೂಟ್ಯೂಬರ್!‘