ಕೋಲಾರ: ತಾಯಿಯಿಂದ ಬೇರ್ಪಟ್ಟ ಕೋತಿ ಮರಿಗೆ ಆಸರೆಯಾದ ಪ್ರಾಣಿ ಪ್ರಿಯ - ಕೋತಿ ಮರಿಗೆ ಆಸರೆ
ಕೋಲಾರ: ಪ್ರಾಣಿಗಳು ಮನುಷ್ಯರೊಂದಿಗೆ ಬೆರೆತಾಗ ಮನುಷ್ಯ ಕೂಡ ಅವುಗಳನ್ನು ತಮ್ಮಂತೆ ನೋಡಿಕೊಳ್ಳುವುದು ಮಾನವನ ಸ್ವಭಾವ. ಇಂತಹ ಒಂದು ಅವಿನಾಭಾವ ಸಂಬಂಧಕ್ಕೆ ಈ ಘಟನೆ ಸಾಕ್ಷಿಯಾಗಿದೆ. ತಾಯಿಯಿಂದ ದೂರವಾದ ಕೋತಿ ಮರಿಗೆ, ಪ್ರಾಣಿ ಪ್ರಿಯ ಜೀವಿ ಆನಂದ್ ಎಂಬುವವರು ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿದ್ದಾರೆ.
ಕೋಲಾರದ ಗಾಂಧಿ ನಗರದ ನಿವಾಸಿ ಜೀವಿ ಆನಂದ್ ಕಳೆದ ಒಂದು ತಿಂಗಳ ಹಿಂದೆ ಅಂತರಗಂಗೆ ಬೆಟ್ಟದಲ್ಲಿನ ಕೋತಿಗಳಿಗೆ ಆಹಾರ ಹಾಕಲು ಹೋಗಿದ್ದರು. ಈ ವೇಳೆ, ತಾಯಿಯಿಂದ ಕೋತಿ ಮರಿಯೊಂದು ಬೇರ್ಪಟ್ಟು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆ ಕೋತಿ ಮರಿಯನ್ನ ಮನೆಗೆ ತಂದು ಅದಕ್ಕೆ ಚಿಕಿತ್ಸೆ ನೀಡಿ, ತಮ್ಮ ಮನೆಯ ಸದಸ್ಯರಂತೆ ಆರೈಕೆ ಮಾಡುತ್ತಿದ್ದಾರೆ. ಆ ಕೋತಿ ಮರಿಗೆ 'ರಾಮು' ಎಂದು ಹೆಸರಿಟ್ಟಿದ್ದು, ಅದು ಮನೆಯ ಸದಸ್ಯರೊಂದಿಗೆ ಆಟವಾಡಿಕೊಂಡು ಕಾಲ ಕಳೆಯುತ್ತಿದೆ.
ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆನಂದ್: ಜೀವಿ ಆನಂದ್ ಅವರು ಪ್ರಾಣಿ ಪ್ರಿಯರು. ಜತೆಗೆ ಹಾವು ಹಿಡಿಯುವ ಹವ್ಯಾಸವನ್ನ ಹೊಂದಿದ್ದಾರೆ. ಅಲ್ಲದೇ ಭಿಕ್ಷರನ್ನ, ನಿರ್ಗತಿಕರನ್ನ ಕರೆದೊಯ್ದು ಅವರಿಗೆ ಕಟಿಂಗ್ ಮಾಡಿಸಿ, ಸ್ನಾನ ಮಾಡಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಡಾಬಾ ಮಾಲೀಕನಿಗೆ ಅದೃಷ್ಟ ಲಕ್ಷ್ಮಿಯಾದ ಕೋತಿ ಮರಿ! ವಿಡಿಯೋ