ಸರ್ಕಾರಿ ಕಚೇರಿಗೆ ಅಲೆದಲೆದು ಸುಸ್ತಾಗಿ ವಿಷಜಂತು ಬಿಟ್ಟು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದ ವ್ಯಕ್ತಿ: ವಿಡಿಯೋ - ವಿಷಜಂತು
ಅಶೋಕನಗರ (ಮಧ್ಯಪ್ರದೇಶ):ತನ್ನ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಬೇಸರಗೊಂಡಿದ್ದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ, ಇನ್ನಾಗದು ಎಂದು ಕೋಪಗೊಂಡು ವಿಷಕಾರಿ ಜಂತುವನ್ನು ಅಲ್ಲಿನ ತಹಸೀಲ್ದಾರ್ ಕಚೇರಿಗೆ ತಂದು ಬಿಟ್ಟಿದ್ದಾನೆ. ಅಧಿಕಾರಿಗಳು ಹೆದರಿ ಅದನ್ನು ಹಿಡಿಯಲು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಚಂದೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿನ ಬುಡಕಟ್ಟು ನಿವಾಸಿ ತೋಟರಾಮ್ ಎಂಬಾತ ವಸತಿ ಸೌಕರ್ಯಕ್ಕಾಗಿ ಸಿಎಂಒ ಮತ್ತು ತಹಸೀಲ್ದಾರ್ ಕಚೇರಿಗೆ ಹತ್ತಾರು ಬಾರಿ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಮಾತ್ರ ಆತನ ಕೆಲಸ ಮಾಡಿಕೊಟ್ಟಿಲ್ಲ. ಇದರಿಂದ ಕೋಪಗೊಂಡಿದ್ದಾನೆ. ಅಧಿಕಾರಿಗಳಿಗೆ ಬುದ್ಧಿ ಕಲಿಸಲೇ ಬೇಕು ಎಂದು ಕಾಡಿನಿಂದ ಅಲ್ಲಿನ ಭಾಷೆಯಲ್ಲಿ ಗೋಹ್ರಾ ಎಂದು ಕರೆಯುವ (ಉಡದ ರೀತಿಯಲ್ಲಿರುವ ಪ್ರಾಣಿ) ವಿಷಕಾರಿ ಪ್ರಾಣಿಯನ್ನು ಕಚೇರಿಗೆ ತಂದು ಬಿಟ್ಟಿದ್ದಾನೆ.
ಇದಕ್ಕೆ ಹೆದರಿದ ಅಧಿಕಾರಿಗಳು ಕಿರುಚುತ್ತಾ ಅದನ್ನು ಹಿಡಿದುಕೊಳ್ಳುವಂತೆ ಕೋರಿದ್ದಾರೆ. ನನ್ನ ಕೆಲಸ ಮಾಡಿಕೊಡದಿದ್ದರೆ, ಇದನ್ನು ಇಲ್ಲೇ ಬಿಟ್ಟು ಹೋಗುತ್ತೇನೆ ಎಂದು ವ್ಯಕ್ತಿ ಹೇಳಿದ್ದಾನೆ. ಅಧಿಕಾರಿಗಳು ಆತನ ಮನವೊಲಿಸಿದ ಬಳಿಕ ಹಿಡಿದು ಅದನ್ನು ಜೇಬಿಗೆ ಹಾಕಿಕೊಂಡಿದ್ದಾನೆ. ತಾನು ವಿಷಕಾರಿ ಜಂತುಗಳನ್ನು ಹಿಡಿಯುವ ಕೆಲಸವನ್ನು 40 ವರ್ಷಗಳಿಂದ ಮಾಡುತ್ತಿದ್ದೇನೆ ಎಂದು ಆತ ಹೇಳುತ್ತಿರುವುದು ವಿಡಿಯೋದಲ್ಲಿದೆ. ಈ ಹಿಂದೆಯೂ ತಾನು ವಿಷಕಾರಿ ಜೀವಿಯನ್ನು ಪಟ್ವಾರಿ ಕಚೇರಿಯಲ್ಲಿ ಬಿಟ್ಟಿದ್ದಾಗಿ ಹೇಳಿದ್ದಾನೆ.
ಇದನ್ನೂ ಓದಿ:ಧಾರವಾಡದಲ್ಲಿ ನಾಗರಹಾವು-ಶ್ವಾನದ ನಡುವೆ ಭೀಕರ ಕಾಳಗ: ವಿಡಿಯೋ ನೋಡಿ