ಬ್ರಾಹ್ಮಣಿ ನದಿಯಲ್ಲಿ ವ್ಯಕ್ತಿ ಎಳೆದೊಯ್ದ ಮೊಸಳೆ: ಮುಂದುವರೆದ ಶೋಧ ಕಾರ್ಯ - ಒಡಿಶಾ ನ್ಯೂಸ್
ಪಟ್ಟಮುಂಡೈ (ಒಡಿಶಾ):ಕೇಂದ್ರಪಾರ ಜಿಲ್ಲೆಯ ಪಟ್ಟಮುಂಡೈ ಬ್ಲಾಕ್‌ನ ಕುಲಸಾಹಿ ಬಳಿ ವ್ಯಕ್ತಿಯೊಬ್ಬನನ್ನು ಮೊಸಳೆ ಬ್ರಾಹ್ಮಿಣಿ ನದಿಗೆ ಎಳೆದೊಯ್ದ ಘಟನೆವರದಿಯಾಗಿದೆ. ನಿನ್ನೆ(ಗುರುವಾರ) ರಾತ್ರಿ 8.30ಕ್ಕೆ ಗ್ರಾಮದ ಅಮೂಲ್ಯ ದಾಸ್ (55) ಎಂಬುವವರು ಮಲ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿ ಅವರನ್ನು ನದಿಗೆ ಎಳೆದೊಯ್ದಿದೆ ಎನ್ನಲಾಗಿದೆ.
ಆತನ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಕುಟುಂಬಸ್ಥರು ನದಿ ದಡಕ್ಕೆ ತೆರಳಿ ಆತನಿಗಾಗಿ ಹುಡುಕಾಟ ನಡೆಸಿದರೂ ಫಲಕಾರಿಯಾಗಲಿಲ್ಲ. ನಂತರ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದರು. ಆದರೆ ಕತ್ತಲಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಒಂದು ತಿಂಗಳಲ್ಲಿ 4 ಬಲಿ: ಮೊಸಳೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ನದಿ ದಡದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಮೊಸಳೆ ದಾಳಿಗೆ ನಾಲ್ಕನೇ ಜೀವ ಬಲಿಯಾದಂತಾಗಿದೆ. ಕಳೆದ ಜೂ. 29 ರಂದು, ಪಟ್ಟಮುಂಡೈನ ತರಡಿಪಾಲ್ ಘಗರಾಡಿಯಾ ಗ್ರಾಮದ ಬಳಿ ವ್ಯಕ್ತಿಯನ್ನು ಮೊಸಳೆ ನದಿಗೆ ಎಳೆದೊಯ್ದಿತ್ತು. ಅದೇ ರೀತಿ ಜೂ. 22 ರಂದು ರಾಜನಗರ ಬ್ಲಾಕ್‌ನಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದ ಮಹಿಳೆಯನ್ನು ಮೊಸಳೆ ಎಳೆದೊಯ್ದಿತ್ತು. ಬಳಿಕ ಜೂನ್ 14 ರಂದು ಅಪ್ರಾಪ್ತ ಬಾಲಕನನ್ನು ಮೊಸಳೆ ಎಳೆದೊಯ್ದಿತ್ತು. ಪದೇ ಪದೆ ಮೊಸಳೆ ದಾಳಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮೇಕೆ ಮೇಯಿಸಲು ಹೋಗಿದ್ದ ಮಹಿಳೆ ಮೊಸಳೆ ದಾಳಿಗೆ ಬಲಿ