ಮಹಾಶಿವರಾತ್ರಿ: ಶಿವನ ಆರಾಧನೆಯಲ್ಲಿ ತೊಡಗಿದ ಶಿವಮೊಗ್ಗ ಜನತೆ
ಶಿವಮೊಗ್ಗ:ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಶಿವರಾತ್ರಿಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ಶಿವನ ಭಕ್ತರು ಶಿವನ ದೇವಾಲಯಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿದ್ದಾರೆ.
ರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ಹರಕೆರೇಶ್ವರ:ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಹರಕೆರೆಯ ಶಿವನನ್ನು ಶ್ರೀರಾಮಚಂದ್ರ ಪ್ರಭು ಪ್ರತಿಷ್ಠಾಪಿಸಿ ಪೂಜಿಸಿದ್ದರು ಎಂಬ ನಂಬಿಕೆಯಿದೆ. ಶ್ರೀರಾಮನು ವನವಾಸಕ್ಕೆ ಬಂದಾಗ ತುಂಗಾ ನದಿ ದಡದ ಮೇಲೆ ಪಶ್ಚಿಮಾಭಿಮುಖವಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರಂತೆ. ಇದರಿಂದ ಹರಕರೆಯಲ್ಲಿರುವ ಶಿವನನ್ನು ಶ್ರೀರಾಮೇಶ್ವರ ಎಂದು ಕರೆಯುತ್ತಾರೆ.
ಇಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಹರಕೆರೆಯ ರಾಮೇಶ್ವರ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಪಕ್ಕದಲ್ಲಿ ಶಿವನ ಬೃಹತ್ ಮೂರ್ತಿಯಿದೆ. ಇನ್ನೂ ಶಿವಮೊಗ್ಗದ ವಿನೋಬನಗರದ ಶಿವಾಲಯ, ವೀರಶೈವ ಕಲ್ಯಾಣ ಮಂದಿರದ ಕಾಶಿ ವಿಶ್ವನಾಥನ ದೇವಾಲಯ ಸೇರಿದಂತೆ ಮೃಗವಧೆಯಲ್ಲೂ ಸಹ ಇಂದು ಶಿವನಿಗೆ ವಿಶೇಷ ಪೊಜೆ ಸಲ್ಲಿಸಲಾಯಿತು. ಇಂದು ರಾತ್ರಿ ಭಕ್ತರು ಜಾಗರಣೆ ಮಾಡಲಿದ್ದು, ಇದರ ಅಂಗವಾಗಿ ಶಿವನ ದೇವಸ್ಥಾನಗಳಲ್ಲಿ ರಾತ್ರಿಯಿಡಿ ಶಿವನ ಪೂಜೆ ಮತ್ತು ಭಜನೆ ನಡೆಯಲಿದೆ.
ಇದನ್ನೂ ಓದಿ:ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ