ಇವರು ಮಹಾರಾಷ್ಟ್ರ ಸರ್ಕಾರಿ ಬಸ್ನ ಮೊದಲ ಮಹಿಳಾ ಚಾಲಕಿ!
ಮಹಾರಾಷ್ಟ್ರ: ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ಬದಿಗೊತ್ತಿ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಅನೇಕ ಮಂದಿ ವಿಶೇಷ ಸಾಧನೆ ಮಾಡಿದ್ದಾರೆ. ಇದೀಗ ಮಾಧವಿ ಸಾಳ್ವೆ ಎಂಬುವರು ಮಹಾರಾಷ್ಟ್ರ ಸರ್ಕಾರದಿಂದ ನೇಮಕವಾದ 206 ಸರ್ಕಾರಿ ಮಹಿಳಾ ಬಸ್ ಚಾಲಕಿಯರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಗೃಹಿಣಿಯಾಗಿ ಕಠಿಣ ಸವಾಲುಗಳನ್ನು ಎದುರಿಸುತ್ತಾ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ಮಾಧವಿ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದು, ರಾಜ್ಯ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಸಿಕ್‌ನಿಂದ ಸಿನ್ನಾರ್ ಮಾರ್ಗವಾಗಿ ಬಸ್ ಓಡಿಸುತ್ತಾರೆ. ಮಹಿಳೆಯರು ಡ್ರೈವಿಂಗ್ ವರ್ಕ್‌ಫೋರ್ಸ್‌ನ ಭಾಗವಾಗಬೇಕು ಎಂಬ ಉದ್ದೇಶದಿಂದ ತಾವು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
2019 ರಲ್ಲಿ ರಾಜ್ಯ ಸಾರಿಗೆ ಸಂಸ್ಥೆಯು 206 ಮಹಿಳೆಯರನ್ನು ಚಾಲಕರನ್ನಾಗಿ ಆಯ್ಕೆ ಮಾಡಿತ್ತು. ಮಾಧವಿ ಮಾತ್ರವಲ್ಲದೇ, ಇತರ ಮೂವರು ಮಹಿಳೆಯರಾದ ಸುಷ್ಮಾ ಕಾರ್ಡಕ್, ಸ್ವಾತಿ ಗಂಗುರ್ಡೆ ಮತ್ತು ಹೀರಾ ಭೋಯೆ ಕೂಡ ಶೀಘ್ರದಲ್ಲೇ ರಾಜ್ಯ ಸಾರಿಗೆ ಬಸ್‌ಗಳನ್ನು ವಿವಿಧ ಮಾರ್ಗಗಳಲ್ಲಿ ಓಡಿಸಲಿದ್ದಾರೆ. ಈ ದಿಟ್ಟ ಮಹಿಳೆಯರ ಕ್ರಮವನ್ನು ಪ್ರಯಾಣಿಕರು ಸಹ ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ :ಕೊಯಂಬತ್ತೂರಿನ ಪ್ರಥಮ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ 24 ವರ್ಷದ ಯುವತಿ