ಮಧುರೆ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು - 68ನೇ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ:ಮಧುರೆ ಶನಿಮಹಾತ್ಮ ಸ್ವಾಮಿಯ 68ನೇ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಟಿಕೆಟ್ ಖಾತ್ರಿ ಆಗಿರುವ ಅಭ್ಯರ್ಥಿಗಳು ಗೆಲುವಿಗಾಗಿ ದೇವರೆ ಮೋರೆ ಹೋದರೆ, ಟಿಕೆಟ್ ಆಕಾಂಕ್ಷಿತರು ಪಕ್ಷದಿಂದ ಟಿಕೆಟ್ ಕೊಡಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಮಧ್ಯಾಹ್ನ 2ಕ್ಕೆ ಮಿಥುನ ಲಗ್ನದಲ್ಲಿ ಶನಿಮಹಾತ್ಮ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ರಥವನ್ನು ಜಯಘೋಷಣೆಗಳೊಂದಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ, ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಭಕ್ತರು ಬಾಳೆಹಣ್ಣು ದವನ ಸಮರ್ಪಿಸಿ ಭಕ್ತಿ ಮೆರೆದರು. ಬೆಂಗಳೂರು, ನೆಲಮಂಗಲ, ಗೌಡಿಬಿದನೂರು, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ದೊಡ್ಡಬಳ್ಳಾಪುರ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿದ್ದರು. ಶಾಸಕ ಟಿ.ವೆಂಕಟರಮಣಯ್ಯಗೆ ಕಾಂಗ್ರೆಸ್ ಪಕ್ಷದಿಂದ, ಬಿ.ಮುನೇಗೌಡರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಖಚಿತವಾಗಿದ್ದು, ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ಬಿಜೆಪಿ ಪಕ್ಷದ ಟಿಕೆಟ್ ಅಕಾಂಕ್ಷಿಗಳಾದ ಧೀರಜ್ ಮುನಿರಾಜು, ಬಿಜೆಪಿ ಮುಖಂಡ ಸಾರಥಿ ಸತ್ಯಪ್ರಕಾಶ್, ಐಎಎಸ್ ಅಧಿಕಾರಿ ಸಿ.ಎಸ್.ಕರಿಗೌಡ ಪಕ್ಷದ ಟಿಕೆಟ್ ತಮಗೆ ಸಿಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂಓದಿ:ದೊಡ್ಡಬಳ್ಳಾಪುರ ನಗರಸಭೆ ಬಜೆಟ್ .. 2023-24ನೇ ಸಾಲಿಗೆ 70 ಕೋಟಿ ರೂ.ಗಳ ಆಯವ್ಯಯ ಮಂಡನೆ