ಚಿಕ್ಕಬಳ್ಳಾಪುರ: ಮಳೆಗಾಗಿ ಅವಿವಾಹಿತ ಯುವಕರಿಂದ ವಿಚಿತ್ರ ಆಚರಣೆ!
ಚಿಕ್ಕಬಳ್ಳಾಪುರ : ತಾಲೂಕಿನ ಕೊತ್ತಕೋಟ ಪಂಚಾಯಿತಿ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದಲ್ಲಿ ಮದುವೆಯಾಗದ ಯುವಕರು ವಿಚಿತ್ರ ಆಚರಣೆಯ ಮೂಲಕ ಮಳೆಗಾಗಿ ಗ್ರಾಮ ದೇವತೆಗಳ ಮೊರೆ ಹೋದರು. ಯುವಕರು ಹುಲ್ಲಿನ ಹೊರೆಗೆ ಬೆಂಕಿ ಹಾಕಿ ಬೆಂಕಿಯಾಟ ಆಡಿದರು. ಗ್ರಾಮದ ಚೌಡೇಶ್ವರಿ ದೇವಿ ಹಾಗೂ ಗಂಗಮ್ಮ ದೇವಾಲಯಗಳಲ್ಲಿ ಹುಲ್ಲಿನ ಹೊರೆಯ ಬೆಂಕಿ ಶಾಖ ತೋರಿಸಿ ಗಂಗಮ್ಮ ಸುಡ್ರೋ, ಚೌಡೇಶ್ವರಿ ಸುಡ್ರೋ ಎಂದು ಪ್ರಾರ್ಥಿಸಿಕೊಂಡರು.
ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದವು. ಅದರೆ ಈ ವರ್ಷ ಮಳೆಯಿಲ್ಲದೆ ಜನ ಜಾನುವಾರುಗಳಿಗೆ ಸಂಕಟ ಎದುರಾಗಿದೆ. ರೈತರು ಆಕಾಶದತ್ತ ನೋಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕೆರೆಗಳು ಬತ್ತಿ ಹೋಗುತ್ತಿವೆ. ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಳೆಗಾಗಿ ವಿಶೇಷ ಪೂಜೆಗಳು ನಡೆಯುತ್ತಿವೆ. ಈಗಾಗಲೇ ಹಲವೆಡೆ ಕಪ್ಪೆಗಳಿಗೆ ಮದುವೆ ಸೇರಿದಂತೆ ವಿಭಿನ್ನ ರೀತಿಯ ಆಚರಣೆಗಳು ನಡೆದಿವೆ.
ಇದನ್ನೂ ಓದಿ :Monsoon: ದೊಡ್ಡಬಳ್ಳಾಪುರದಲ್ಲಿ ಮಳೆಗಾಗಿ 'ಚಂದಮಾಮ ಮದುವೆ' ಮಾಡಿಸಿದ ಗ್ರಾಮಸ್ಥರು: ವಿಡಿಯೋ