ಮಾಯದಂತ ಮಳೆ ಬಂತಣ್ಣಾ ಮದಗದ ಕೆರೆಗೆ..: ಹೊಲ-ಗದ್ದೆ, ತೋಟಗಳಿಗೆ ಚೈತನ್ಯ- ವಿಡಿಯೋ
ಚಿಕ್ಕಮಗಳೂರು :ಕಳೆದ 15 ದಿನಗಳ ಹಿಂದೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ರಾತ್ರೋರಾತ್ರಿ ತುಂಬಿ ಕೋಡಿ ಬಿದ್ದಿದ್ದು, ಇದೀಗ ಪ್ರವಾಸಿ ತಾಣವಾಗಿದೆ. ಸುಮಾರು 336 ಹೆಕ್ಟೇರ್, 2000 ಎಕರೆ ವಿಸ್ತೀರ್ಣದ ಕೆರೆ ತುಂಬಿ ವಿಶಾಲ ಸರೋವರದಂತೆ ಕಾಣುತ್ತಿದೆ.
ಕೆರೆ ನೋಡಲು ಜನರು ಬರುತ್ತಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸುಮಾರು ಇಪ್ಪತ್ತು ದಿನಗಳ ಹಿಂದೆ ಇದೇ ಕೆರೆ ಖಾಲಿ ಬಿದ್ದಿರುವುದನ್ನು ಕಂಡು ಈ ಬಾರಿ ಬರಗಾಲ ಗ್ಯಾರಂಟಿ ಎಂದು ಸ್ಥಳೀಯರು ಕಳವಳ ಹೊಂದಿದ್ದರು.
ಕೆರೆ ತುಂಬಿರುವುದರಿಂದ ಸುತ್ತಲಿನ 23 ಹಳ್ಳಿಯ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾದಂತಾಗಿದೆ. ಹೊಲ-ಗದ್ದೆ, ತೋಟಗಳಿಗೆ ಚೈತನ್ಯ ಬಂದಿದೆ. ಕೆರೆಯಿಂದ ಕೋಡಿ ಬಿದ್ದ ನೀರು ವೇದಾವತಿ ನದಿ ಸೇರಿ ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಡ್ಯಾಂ ಸೇರುತ್ತಿದೆ. ಮಾಯದಂತ ಮಳೆ ಬಂತಣ್ಣಾ ಮದಗಾದ ಕೆರೆಗೆ.. ಎಂದು ಇತಿಹಾಸದಲ್ಲಿ ಪೂರ್ವಿಕರು ಪದ ಕಟ್ಟಿದ್ದು ಇದೇ ಕೆರೆಯ ಬಗ್ಗೆ ಅನ್ನೋದು ಇಲ್ಲಿ ಉಲ್ಲೇಖಾರ್ಹ.
ಪ್ರವಾಸಿಗರಾದ ಮಲ್ಲಿಕಾರ್ಜುನ್ ಮಾತನಾಡಿ, "ಜಿಲ್ಲೆಯ ಪ್ರಸಿದ್ದ ಮದಗದ ಕೆರೆ ತುಂಬಿರುವುದು ಖುಷಿ ನೀಡಿದೆ. ಈ ಭಾಗದ ಆನೇಕ ರೈತರಿಗೆ ಅನುಕೂಲವಾಗಿದೆ" ಎಂದರು.
ಇದನ್ನೂ ಓದಿ :ಶಿವಮೊಗ್ಗದಲ್ಲಿ ಮಳೆ ಮಾಯ, ಶುರುವಾಯ್ತು ಬಿಸಿಲ ಝಳ