ಚಿಕ್ಕಬಳ್ಳಾಪುರ : ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆಯಾದ ಯುವತಿ - ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕ ಆಸ್ಪತ್ರೆ
ಚಿಕ್ಕಬಳ್ಳಾಪುರ : ಪ್ರೀತಿಸಿ ಬಳಿಕ ತನ್ನಿಂದ ದೂರವಾಗಲು ಯತ್ನಿಸಿದ ಯುವಕನೊಂದಿಗೆ ಯುವತಿ ಮದುವೆಯಾದ ಘಟನೆ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ. ದಲಿತ ಸಂಘಟನೆಗಳ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ನಡೆಸುವ ಮೂಲಕ ಇಬ್ಬರಿಗೂ ಮದುವೆ ಮಾಡಿಸಿದ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಕಿರಿಗಿಂಬಿ ಗ್ರಾಮದ ಯುವಕ ಚೇತನ್ ಹಾಗೂ ಇಟಪ್ಪನಹಳ್ಳಿ ಗ್ರಾಮದ ವನಿತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವನಿತಾ ಈಗ ಗರ್ಭಿಣಿಯಾಗಿದ್ದಾಳೆ. ಈ ವಿಚಾರವನ್ನು ಪ್ರಿಯಕರ ಚೇತನ್ ಬಳಿ ತಿಳಿಸಿದ್ದಾರೆ. ಇದಕ್ಕೆ ಚೇತನ್ ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ವನಿತಾ ಮದುವೆ ಮಾಡಿಕೊಳ್ಳುವಂತೆ ಚೇತನ್ನಲ್ಲಿ ಕೇಳಿಕೊಂಡಿದ್ದಳು.
ಶುಕ್ರವಾರ ಚೇತನ್ ವನಿತಾಳನ್ನು ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಗರ್ಭ ತೆಗೆಸಲು ಮುಂದಾಗಿದ್ದ. ಆದರೆ ಗರ್ಭ ತೆಗೆಸಲು ಯುವತಿ ನಿರಾಕರಿಸಿದ್ದಾಳೆ. ಅಲ್ಲದೆ ಚೇತನ್ ಜೊತೆ ವಾಗ್ವಾದ ನಡೆಸಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ವಿಚಾರಿಸಿದಾಗ ಚೇತನ್ ತಪ್ಪು ಮಾಡಿರುವುದು ಗೊತ್ತಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ದಲಿತ ಸಂಘಟನೆ ಮುಖಂಡರು ಚೇತನ್ಗೆ ಬುದ್ಧಿವಾದ ಹೇಳಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಬಳಿಕ ಇಬ್ಬರ ಪೋಷಕರನ್ನು ಕರೆಸಿ ರಾಜಿ ಸಂಧಾನ ಮಾಡಿದ್ದಾರೆ. ಮದುವೆಯ ಸಂದರ್ಭದಲ್ಲಿ ಕೆಲವರು ಸೆರೆಹಿಡಿದ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ :ಶ್ರೀಗಂಧದ ಮರಗಳ್ಳರು ಅಂದರ್: ಆರೋಪಿಗಳಿಂದ 4.52 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ..