ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ ಮನೋಜ್ ಸಿನ್ಹಾ-ವಿಡಿಯೋ - ಲೆಫ್ಟಿನೆಂಟ್ ಗವರ್ನರ್
ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): Muharram procession in Srinagar: ಶ್ರೀನಗರದಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್(ಎಲ್‌ಜಿ) ಮನೋಜ್ ಸಿನ್ಹಾ ಭಾಗವಹಿಸಿದರು.ಮುಸ್ಮಿಂ ಸಮುದಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಹಬ್ಬಗಳಲ್ಲಿ ಮೊಹರಂ ಕೂಡ ಒಂದು. ಈ ದಿನ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಇಬ್ನ ಅಲಿ ಅವರ ಮರಣವನ್ನು ಸ್ಮರಿಸುವ ದಿನವಾಗಿದೆ. ಹುಸೇನ್ ಇಬ್ನ ಹಾಗೂ ಹುತಾತ್ಮರ ಸ್ಮರಣಾರ್ಥ ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳ 10ನೇ ದಿನದಂದು ಈ ಮೆರವಣಿಗೆ ನಡೆಸಲಾಗುತ್ತದೆ.
ಈಗಿನ ಇರಾಕ್‌ನಲ್ಲಿ ಸುಮಾರು 1400 ವರ್ಷಗಳ ಹಿಂದೆ ನಡೆದ ಕರ್ಬಲಾ ಯುದ್ಧದಲ್ಲಿ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಅವರ ಕುಟುಂಬ ಸದಸ್ಯರು ಮತ್ತು ಸಹಚರರೊಂದಿಗೆ ಹುತಾತ್ಮರಾಗಿದ್ದರು. ಹೀಗಾಗಿ ಪ್ರಪಂಚದಾದ್ಯಂತ ಶಿಯಾ ಮುಸ್ಲಿಮರು ಹುಸೇನ್ ಮತ್ತು ಅವರ ಕುಟುಂಬದ ದುರಂತಕ್ಕೆ ಸಂತಾಪ ಸೂಚಿಸುತ್ತಾರೆ.
ಗೌರವ ಮತ್ತು ಒಗ್ಗಟ್ಟಿನ ಸೂಚಕವಾಗಿ ಎಲ್‌ಜಿ ಸಿನ್ಹಾ ಅವರು ಶನಿವಾರ ಬೆಳಗ್ಗೆ ಶ್ರೀನಗರದ ಬೋಟಾ ಕಡಲ್ ಪ್ರದೇಶದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿ ಹುಸೇನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಉಪಾಹಾರ ವಿತರಿಸಿ, ಚಾದರ್ ಅರ್ಪಿಸಿದರು. 34 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶ್ರೀನಗರದಲ್ಲಿ ದೇಶದ ಗಣ್ಯರೊಬ್ಬರು ಸಾಮೂಹಿಕ ಕೂಟದಲ್ಲಿ ಭಾಗಿಯಾಗಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಭೇಟಿ ಹಿನ್ನೆಲೆ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಮತ್ತು ಇತರ ಉನ್ನತ ಅಧಿಕಾರಿಗಳು ಇದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ವಿಜಯ್ ಕುಮಾರ್ "ಎಲ್‌ಜಿ ಭೇಟಿ ಜನರ ಬೆಂಬಲದಿಂದ ಸಾಧ್ಯವಾಯಿತು. ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದೆ. ಜನರು ಶಾಂತಿಯನ್ನು ಬಯಸುತ್ತಾರೆ. ನಾವು ಅವರಿಗೆ ಭದ್ರತೆಯನ್ನು ಒದಗಿಸುತ್ತೇವೆ. ಆದರೆ ಜನರ ಪಾತ್ರ ಇಲ್ಲಿ ಮುಖ್ಯವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ:ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ತಗುಲಿ ನಾಲ್ವರು ಸಾವು.. 6 ಮಂದಿಗೆ ಗಾಯ