ದೊಡ್ಡಬಳ್ಳಾಪುರದಲ್ಲಿ ನಾಯಿಗಾಗಿ ಹವಣಿಸಿ ಬೋನಿಗೆ ಬಿದ್ದ ಚಿರತೆ- ವಿಡಿಯೋ - Doddaballapur
ದೊಡ್ಡಬಳ್ಳಾಪುರ: ನಗರದ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ದೊಡ್ಡಬಳ್ಳಾಪುರದ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿತ್ತು. ಜಾನುವಾರುಗಳ ಮೇಲೆ ದಾಳಿ ನಡೆಸಿ ಈಗಾಗಲೇ ಎರಡು ಹಸುಗಳನ್ನು ಬಲಿ ಪಡೆದಿತ್ತು. ಕೆಲವು ದಿನಗಳಿಂದ ತಾಲೂಕಿನ ಹಿರೇಮುದ್ದೇನಹಳ್ಳಿ, ಕಲ್ಲುಕೋಟೆ ಅರಣ್ಯ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದು, 2 ದಿನಗಳ ಹಿಂದಷ್ಟೇ ಮೇಲಿನ ಜೂಗಾನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು.
ಇದರಿಂದ ತೀವ್ರ ಭಯಭೀತರಾಗಿದ್ದ ಗ್ರಾಮದ ಜನರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಿರೇಮುದ್ದೇನಹಳ್ಳಿಯಲ್ಲಿ ನಾಯಿ ಸಮೇತ ಬೋನು ಇಟ್ಟಿದ್ದರು. ನಾಯಿಯನ್ನು ಕಂಡು ತಿನ್ನಲು ಬೋನಿನತ್ತ ಧಾವಿಸಿ ಬಂದ ಚಿರತೆ ನಿನ್ನೆ ರಾತ್ರಿ ಸೆರೆಯಾಗಿದೆ. ಜನರ ನಿದ್ದೆಗೆಡಿಸಿದ ಚಿರತೆ ಬೋನಿಗೆ ಬಿದ್ದ ಸಂಗತಿ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಕೊನೆಗೂ ಚಿರತೆಯನ್ನು ಬೋನಿನಲ್ಲಿ ಕಂಡು ಗ್ರಾಮಸ್ಥರು ನಿರಾಳರಾದರು.
ಇದನ್ನೂ ಓದಿ:ಶಿವಮೊಗ್ಗ: ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು