ಗದಗ : ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ - ಗದಗ ರಸ್ತೆ ಮೇಲೆ ಚಿರತೆ ಪ್ರತ್ಯಕ್ಷ
ಗದಗ: ಇಲ್ಲಿಯ ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆರಾಮದಾಯಕವಾಗಿ ವಿಶ್ರಾಂತಿ ರೀತಿಯಲ್ಲಿ ಚಿರತೆ ಕಂಡು ಬಂದಿದ್ದು, ಪ್ರಯಾಣಿಕರೊಬ್ಬರು ಚಿರತೆಯ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇನ್ನು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಬಿಡಾರ ಕೂಡ ಹೂಡಿದ್ದಾರೆ. ಬಿಂಕದಕಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರು ರಾತ್ರಿ ವೇಳೆ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ, ಚಿರತೆ ಇರುವ ಬಗ್ಗೆ ಮಾಹಿತಿ ಇದೆ, ಈಗಾಗಲೇ ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ. ರಸ್ತೆ ಮೇಲೆ ಕಂಡಿದ್ದ ಚಿರತೆ ಅಲ್ಲಿಂದ ಬೇರೊಂದು ಕಡೆ ಹೋಗಿದೆ. ಸಾರ್ವಜನಿಕರು ಆದಷ್ಟು ನಿರ್ಜನ ಪ್ರದೇಶಗಳಲ್ಲಿ ಹೋಗದಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ.
ಇದನ್ನೂ ಓದಿ:Watch.. ಪಾಳು ಬಿದ್ದ ಮನೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ