ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ 70 ಕೆ.ಜಿ ತೂಕದ ಚಿರತೆ ಸೆರೆ: ವಿಡಿಯೋ - ಚಿರತೆ ಸೆರೆ
Published : Dec 31, 2023, 12:29 PM IST
ಹಾಪುರ (ಉತ್ತರಪ್ರದೇಶ):ಹಲವು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉತ್ತರಪ್ರದೇಶದ ಕಪುರಪುರ ಪ್ರದೇಶದಲ್ಲಿ ಚಿರತೆ ಕಂಡು ಹಲವು ದಿನಗಳಿಂದ ಭಯಭೀತರಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸಂಪೂರ್ಣ ಸುರಕ್ಷಿತವಾಗಿದ್ದು, ಕಾರ್ಯಾಚರಣೆಯಲ್ಲಿ ಯಾವುದೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಪುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಪಾ ಗ್ರಾಮದ ಹೊಲದಲ್ಲಿ ಚಿರತೆ ಕಾಣಿಸಿಕೊಂಡು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ, ಸಾಕಷ್ಟು ಪ್ರಯತ್ನದ ಬಳಿಕ ಸೆರೆ ಹಿಡಿದಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ಬಳಿಕ 10ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯ ತಂಡ ಚಿರತೆ ಸೆರೆಹಿಡಿದಿದ್ದಾರೆ.
ಜನರನ್ನು ಕಂಡು ಹೆದರಿದ ಚಿರತೆ ಪೊದೆಯಲ್ಲಿ ಅಡಗಿಕೊಂಡಿತ್ತು. ಬಳಿಕ ಬಲೆ ಬೀಸಿ ಹಿಡಿಯಲಾಗಿದೆ. ಚಿರತೆ ಓಡಾಡುತ್ತಿರುವ ಬಗ್ಗೆ ಬಹಳ ದಿನಗಳಿಂದ ನಿರಂತರವಾಗಿ ಗ್ರಾಮಸ್ಥರಿಂದ ಕರೆಗಳು ಬರುತ್ತಿದ್ದವು. ಬಳಿಕ ಚಿರತೆ ಹಿಡಿಯಲು ಅರಣ್ಯ ಇಲಾಖೆ ತಂಡ ರಚಿಸಿತ್ತು. ಹಲವೆಡೆ ಹೆಜ್ಜೆ ಗುರುತುಗಳು ಪತ್ತೆಯಾಗಿತ್ತು. ಕಾರ್ಯಾಚರಣೆ ವೇಳೆ ಚಿರತೆಗೆ ಯಾವುದೇ ಗಾಯವಾಗಿಲ್ಲ. ಚಿರತೆಯು ಸುಮಾರು 70 ಕೆ.ಜಿ ತೂಕ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.