ಜನರ ಗುಂಪಿಗೆ ಹೆದರಿ ನೀಲಗಿರಿ ಮರ ಏರಿ ಕುಳಿತ ಚಿರತೆ.. - ನೀಲಗಿರಿ ಮರ ಏರಿ ಕುಳಿತ ಚಿರತೆ
ಪಿಲಿಭಿತ್(ಉತ್ತರಪ್ರದೇಶ): ಕಾಡಿನಿಂದ ಹೊರಬಂದ ಚಿರತೆ ಕಂಡ ಗ್ರಾಮಸ್ಥರು ಲಾಠಿ, ದೊಣ್ಣೆಗಳಿಂದ ಅಟ್ಟಿಸಿಕೊಂಡು ಹೋಗಿದ್ದು, ಚಿರತೆ ಬೆದರಿ ನೀಲಗಿರಿ ಮರ ಹತ್ತಿ ಕುಳಿತ ಘಟನೆ ಪಿಲಿಭಿತ್ ಜಿಲ್ಲೆಯ ಗಜರೌಲಾ ಪೊಲೀಸ್ ಠಾಣೆ ವ್ಯಾಪ್ತಿ ಮುದೇಲಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಮಾಹಿತಿ ಅರಿತ ಅರಣ್ಯ ಇಲಾಖೆ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿದ್ದರಿಂದ ಜನರು ಆತಂಕಗೊಂಡಿದ್ದು, ಅದನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಆದರೆ ಚಿರತೆ ಮರ ಏರಿ ಕುಳಿತಿದ್ದು, ಅರಣ್ಯ ಇಲಾಖೆ ತಂಡ ಚಿರತೆ ಮೇಲೆ ನಿಗಾ ಇಟ್ಟಿದೆ. ಸೆರೆ ಹಿಡಿಯವ ಕಾರ್ಯದಲ್ಲಿ ನಿರತವಾಗಿದೆ.
ಕಾಡಿನಿಂದ ಹೊರಬಂದ ಚಿರತೆ ಕಂಡ ಮುದೇಲಾ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಜನಸಂದಣಿ ಬಳಿ ಬರುತ್ತಿದ್ದಂತೆ ಚಿರತೆಗೆ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ ಹಿಡಿದು ಬೆನ್ನತ್ತಿ ಓಡಿಸಿದ್ದಾರೆ. ಗ್ರಾಮಸ್ಥರ ಗುಂಪು ನೋಡಿ ಗಾಬರಿಗೊಂಡ ಚಿರತೆ ಜಮೀನಿನಲ್ಲಿದ್ದ ನೀಲಗಿರಿ ಮರ ಏರಿ ಕುಳಿತಿದೆ. ಚಿರತೆ ಮರ ಏರುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಶುರು ಮಾಡಿದೆ.
ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಸದ್ಯ ಗಜರೌಳ ಠಾಣೆಯ ಪೊಲೀಸರು ಕೂಡ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಗ್ರಾಮಸ್ಥರ ಗುಂಪನ್ನು ತೆರವುಗೊಳಿಸಿದ್ದಾರೆ. ಗ್ರಾಮಸ್ಥರಿಗೆ ಹೆದರಿ ಚಿರತೆ ಮರ ಹತ್ತಿ ಕುಳಿತಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಸಂಜೀವ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಕೇರಳದಲ್ಲಿ ನಿನ್ನೆ ಮೋದಿ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋರಿಕೆ: ವಿಡಿಯೋ