ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾರ್ಮಿಕರು
Published : Sep 27, 2023, 4:19 PM IST
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಪಟ್ಟಣದ ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಇಟ್ಟಿದ್ದ ಬೋನಿನೊಳಗೆ ಇಂದು ಬೆಳಗ್ಗೆ ಚಿರತೆ ಬಿದ್ದಿದೆ. ಕಳೆದ ಜುಲೈನಲ್ಲಿ ಕಾರ್ಖಾನೆಯ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಇದರಿಂದ ಕಾರ್ಖಾನೆಯವರು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನ್ ಇರಿಸಿದ್ದರು. ಆದರೆ ಇದುವರೆಗೆ ಬೋನ್ ಗೆ ಚಿರತೆ ಬಿದ್ದಿರಲಿಲ್ಲ. ನಂತರ ಅರಣ್ಯ ಇಲಾಖೆಯವರು ಕಾರ್ಖಾನೆಯ ಪಿಕಾಕ್ ಪಾಯಿಂಟ್ ಬಳಿ ಚಿರತೆ ಸೆರೆಗಾಗಿ ಬೋನ್ ಇಟ್ಟಿದ್ದರು.
ಇಂದು ಬೆಳಗ್ಗೆ ಚಿರತೆ ಆ ಬೋನ್ಗೆ ಬಿದ್ದಿದೆ. ಚಿರತೆಯು 2 ರಿಂದ 3 ವರ್ಷ ವಯಸ್ಸಿನದ್ದಿರಬಹುದೆಂದು ಅಂದಾಜಿಸಲಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ದೊಡ್ಡದಾದ ಬೋನ್ ಇಡಲಾಗಿತ್ತು. ಮೊದಲು ಅರವಳಿಕೆ ಮದ್ದು ನೀಡಿ ಬೇರೆ ಬೋನ್ ಗೆ ವರ್ಗಾಯಿಸಲು ಪಶು ವೈದ್ಯ ವಿನಯ್ ಅವರು ತಮ್ಮ ಗನ್ ಮೂಲಕ ಡಾಟ್ ಮಾಡಿದ್ದಾರೆ. ಚಿರತೆಯ ಆರೋಗ್ಯವನ್ನು ಪರೀಕ್ಷಿಸಿ ಚಿರತೆಯನ್ನು ಬೇರೆ ಕಡೆ ಬಿಡುವ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಚಿರತೆ ಬೋನ್ ಗೆ ಬಿದ್ದಿರುವುದರಿಂದ ವಿಶ್ವಶ್ವೇರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ಬಾರಿ ಚಿರತೆ ಕಾರ್ಮಿಕರಿಗೆ ಕಾಣಿಸಿಕೊಂಡ ನಂತರ ಕಾರ್ಮಿಕರು ಕಾರ್ಖಾನೆಯಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡಲು ಭಯ ಭೀತರಾಗಿದ್ದರು. ಅಲ್ಲದೇ ಚಿರತೆ ಸೆರೆ ಹಿಡಿಯಲು ಆಗ್ರಹಿಸಿದ್ದರು.
ಇದನ್ನೂಓದಿ:ಮೈಸೂರಲ್ಲಿ ಹುಲಿ ದಾಳಿಗೆ ಹಸು ಬಲಿ.. ಮಂಡ್ಯದಲ್ಲಿ ಕರು ಹೊತ್ತೊಯ್ದು ತಿಂದ ಚಿರತೆ