ಚಾಮರಾಜನಗರ: ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ
ಚಾಮರಾಜನಗರ : ಬಾಲಕನ ಮೇಲೆ ದಾಳಿ ಮಾಡಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾದ ಘಟನೆ ಯಳಂದೂರು ತಾಲೂಕಿನ ಕುಂತೂರು ಬೆಟ್ಟದಲ್ಲಿ ನಡೆದಿದೆ. ಸೆರೆಯಾದ ಚಿರತೆಗೆ ಅಂದಾಜು 6 ವರ್ಷ ವಯಸ್ಸಾಗಿದ್ದು, ಗಂಡು ಚಿರತೆಯಾಗಿದೆ. ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡು ಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜುಲೈ ತಿಂಗಳ 25 ರಂದು ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ 9 ವರ್ಷದ ಬಾಲಕನ ಮೇಲೆ ಈ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಅದಾದ ಬಳಿಕ, ಅರಣ್ಯ ಇಲಾಖೆ 7-8 ಕಡೆ ಬೋನ್ಗಳನ್ನು ಇಟ್ಟು ಕಾರ್ಯಾಚರಣೆ ನಡೆಸಿತ್ತು. ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ ಕೊನೆಗೂ ಯಶ ಕಂಡಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ನಂತರ, ಅರಣ್ಯ ಇಲಾಖೆ ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿಗಳಿಗೆ ಭದ್ರತೆ ಕೊಡುವ ಮೂಲಕ ಗಮನ ಸೆಳೆದಿತ್ತು.
ಇದನ್ನೂ ಓದಿ :ಚಾಮರಾಜನಗರ: ಶಾಲೆಗೆ ಅರಣ್ಯ ಇಲಾಖೆ ಕಣ್ಗಾವಲು - ವಿದ್ಯಾರ್ಥಿಗಳಿಗೆ ಫಾರೆಸ್ಟ್ ಸಿಬ್ಬಂದಿ ಬಿಗಿ ಭದ್ರತೆ