ಬೆಂಗಳೂರು: ರಕ್ಷಣಾ ಕಾಯ್ದೆಗೆ ಆಗ್ರಹಿಸಿ ವಕೀಲರ ಪ್ರತಿಭಟನೆ - Separate Protection Act
ಬೆಂಗಳೂರು : ರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಸಂಘದ ಪ್ರತಿಭಟನೆ ಮತ್ತೊಮ್ಮೆ ಭುಗಿಲೆದ್ದಿದೆ. ವಕೀಲರ ರಕ್ಷಣೆಗಾಗಿ ಕಾನೂನು ಜಾರಿಗೆ ತರಲು ಆಗ್ರಹಿಸಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಕೀಲರು ಪ್ರತಿಭಟಿಸಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಕೋರ್ಟ್ ಆವರಣದ ಮುಂಭಾಗ ಹಾಗೂ ಕೆ. ಆರ್ ಸರ್ಕಲ್ ಬಳಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಸ್ಥಳದಲ್ಲಿ ಮೂವರು ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರು, ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ಐನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುವುದನ್ನ ತಡೆಗಟ್ಟಲು ಪ್ರತ್ಯೇಕ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ವಕೀಲರ ಸಂಘ ಈ ಹಿಂದೆಯೂ ಪ್ರತಿಭಟನೆ ನಡೆಸಿತ್ತು.