ಸಿದ್ದಾರೂಢ ಮಠದಲ್ಲಿ ಅದ್ಧೂರಿಯಾಗಿ ನೆರವೇರಿದ ಲಕ್ಷದೀಪೋತ್ಸವ
Published : Dec 13, 2023, 3:06 PM IST
ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಮಂಗಳವಾರ ಲಕ್ಷದೀಪೋತ್ಸವ ಅದ್ದೂರಿಯಾಗಿ ನೆರವೇರಿತು. ಶ್ರೀಮಠದ ಪ್ರಾಂಗಣದಲ್ಲಿ ಹಚ್ಚಲಾಗಿದ್ದ ಬಗೆಬಗೆಯ ದೀಪಗಳ ಬೆಳಕಿನಿಂದ ಆವರಣವೆಲ್ಲ ಜಗಮಗಿಸುತ್ತಿತ್ತು.
ಭಕ್ತರಿಂದ ಸಿದ್ಧಾರೂಢ ಮಹಾರಾಜ ಕೀ ಜೈ ಎಂಬ ಘೋಷ ವಾಕ್ಯಗಳು ಮೊಳಗಿದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಠದ ಪ್ರಾಂಗಣದಲ್ಲಿ ದೀಪ ಹಚ್ಚುವ ಮೂಲಕ ಮೆರುಗು ತಂದರು. ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿತ್ತು. ಈ ರಂಗೋಲಿಯ ಮೇಲೆ ಭಕ್ತರು ಪಣತೆಯನ್ನಿಟ್ಟು ದೀಪ ಬೆಳಗಿಸಿದರು. ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ಭಕ್ತರು ಆಗಮಿಸಿದ್ದರು. ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಸಾವಿರಾರು ಭಕ್ತರು ಹಣತೆಗೆ ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸಿ ಖುಷಿಪಟ್ಟರು. ಸಂಜೆ ಮಠದ ಆವರಣದಲ್ಲಿ ನೂರಾರು ಜನರು ಆಕಾಶ ಬುಟ್ಟಿ ಹಾರಿಸಿ ಸಂಭ್ರಮಿಸಿದರೆ, ಆಕರ್ಷಕ ಸಿಡಿಮದ್ದುಗಳು ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ಸಿದ್ಧಾರೂಢಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಕರ್ತೃ ಗದ್ದುಗೆಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಠಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಇದನ್ನೂ ಓದಿ:ಉಡುಪಿಯಲ್ಲಿ ಹಾಲಿನ ಕ್ರೇಟ್ಗಳಿಗೆ ಪಿಕಪ್ ವಾಹನ ಡಿಕ್ಕಿ: ರಸ್ತೆ ತುಂಬಾ ಕ್ಷೀರ - ವಿಡಿಯೋ