ವಿಜೃಂಭಣೆಯಿಂದ ನಡೆದ ಕುಶಾಲನಗರ ಗಣಪತಿ ರಥೋತ್ಸವ - ganapati rathotsava
ಕೊಡಗು: ನೂರಾರು ವರ್ಷಗಳ ಇತಿಹಾಸವಿರುವ ಕುಶಾಲನಗರ ಶ್ರೀ ಗಣಪತಿ ರಥೋತ್ಸವ ನಿನ್ನೆ ಆದ್ಧೂರಿಯಾಗಿ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸರಳವಾಗಿ ಆಚರಿಸಿದ್ದ ಉತ್ಸವ ಈ ಬಾರಿ ಕಳೆಗಟ್ಟಿತ್ತು. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಬೆಳಗ್ಗೆ 11.30ರ ಸುಮಾರಿಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ ದೇವರ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದ ಜೊತೆ ಹೊರತಂದು ರಥದಲ್ಲಿ ಕುಳ್ಳಿರಿಸಲಾಯಿತು. ಇದಕ್ಕೂ ಮೊದಲು ಪಕ್ಕದ ಹೆಬ್ಬಾಲೆ ಮತ್ತು ಆವರ್ತಿಯಿಂದ ಬಂದಿದ್ದ ಗೋವುಗಳಿಗೆ ಪೂಜೆ ನೆರವೇರಿತು. ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದೆದುರಿನ ರಸ್ತೆಯುದ್ದಕ್ಕೂ ಕರ್ಪೂರ ಹರಡಿ, ಬೆಂಕಿ ಹಚ್ಚಿ ಪ್ರಾರ್ಥಿಸಿದರು.
Last Updated : Feb 3, 2023, 8:32 PM IST