Congress guaranty: ಶಕ್ತಿ ಯೋಜನೆಯಡಿ ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಹಿಳೆಯರ ಓಡಾಟ ನಿರೀಕ್ಷೆ! - ಈಟಿವಿ ಭಾರತ ಕನ್ನಡ
ಚಾಮರಾಜನಗರ: ಭಾನುವಾರದಿಂದ ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದ್ದು, ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಂದಿ ಇದರ ಅನುಕೂಲ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ. ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈ ಸಂಬಂಧ ಮಾತನಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ನಿತ್ಯ ಜಿಲ್ಲೆಯಲ್ಲಿ 480 ಬಸ್ಗಳು ಸಂಚರಿಸಲಿದ್ದು, ಸರಾಸರಿ 1.70 ಲಕ್ಷ ಪ್ರಯಾಣಿಕರು ಓಡಾಟ ನಡೆಸುತ್ತಾರೆ.
ಇದರಲ್ಲಿ 75-80 ಸಾವಿರ ಮಂದಿ ನಿತ್ಯ ಶಕ್ತಿ ಯೋಜನೆಯ ಅನುಕೂಲ ಪಡೆಯಲಿದ್ದಾರೆ. ಹೊರರಾಜ್ಯಕ್ಕೆ ಪ್ರಯಾಣ ಬೆಳೆಸುವವರು ಗಡಿ ತನಕ ಉಚಿತವಾಗಿ ಪ್ರಯಾಣಿಸಿ ಅದಾದ ಬಳಿಕ ಟಿಕೆಟ್ ಪಡೆಯಬೇಕು. ಜಾತ್ರಾ ವಿಶೇಷ ಬಸ್ಗಳಲ್ಲೂ ಶಕ್ತಿ ಯೋಜನೆ ಅನ್ವಯವಾಗಲಿದ್ದು, ಖಾಸಗಿ ಬಸ್ ಅನ್ನು ಅವಲಂಭಿಸುವವರು ಈಗ ಸಾರಿಗೆ ಸಂಸ್ಥೆ ಬಸ್ಗಳಿಗೆ ಶಿಫ್ಟ್ ಆಗಲಿದ್ದಾರೆ. ಅಲ್ಲದೇ ಓಲ್ವೋ, ಸ್ಲೀಪರ್, ಸೆಮಿಸ್ಲೀಪರ್ ನಂತಹ ಬಸ್ಗಳಗೆ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ. ಬಸ್ನಲ್ಲಿ ಉಚಿತ ಪ್ರಯಾಣ ಮಾಡಲು ಇಚ್ಛಿಸುವ ಮಹಿಳೆಯರು, ಸರಿಯಾದ ಗುರುತಿನ ಚೀಟಿಯನ್ನು ಜೊತೆಯಲ್ಲೆ ಇರಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.