ವಿಜಯಪುರ: ಬತ್ತಿದ ಕೃಷ್ಣಾ ನದಿ, ಮೀನುಗಳ ಮಾರಣಹೋಮ - ಸಾವಿರಾರು ಮೀನುಗಳ ಮಾರಣ ಹೋಮ
ವಿಜಯಪುರ:ಮುಂಗಾರು ಮಳೆ ಕೈಕೊಟ್ಟಿದ್ದು, ಇದರ ಬೆನ್ನಲ್ಲೆ ಮಹಾರಾಷ್ಟ್ರದಿಂದ ನೀರು ಬಿಡುಗಡೆಯಾಗದ ಕಾರಣ,
ಕೃಷ್ಣಾ ನದಿ ಬತ್ತಿ ಹೋಗುತ್ತಿದೆ. ಇದರ ಪರಿಣಾಮ ನದಿಯಲ್ಲಿದ್ದ ಸಾವಿರಾರು ಮೀನುಗಳ ಮಾರಣ ಹೋಮ ಆಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಮೀನುಗಳು ವಿಲವಿಲನೇ ಒದ್ದಾಡಿ ಸಾಯುತ್ತಿವೆ.
ಸತ್ತ ಮೀನು ತಿನ್ನಲು ರಣಹದ್ದುಗಳು ಸೇತುವೆ ಸುತ್ತಮುತ್ತವೇ ಹಾರಾಡುತ್ತಿವೆ. ನದಿಯಲ್ಲಿ ನೀರಿಲ್ಲದೆ ದಡದಲ್ಲೇ ಸಾವಿರಾರು ಮೀನುಗಳು ಸಾಯುತ್ತಿವೆ. ಈಗ ಬತ್ತಿದ ಕೃಷ್ಣಾ ನದಿಯಲ್ಲಿ ಜಲಚರಗಳ ರೋಧನೆ ಆರಂಭವಾಗಿದೆ. ಕೃಷ್ಣಾ ನದಿಯಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ನೀರು ಇರಲಿಲ್ಲ. ನದಿಯ ಒಡಲು ಖಾಲಿ ಖಾಲಿಯಾಗಿ ಒಣಗಿದ ನದಿಯನ್ನು ನೋಡಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನದಿಯಲ್ಲಿ ಸಾವನ್ನಪ್ಪಿದ ಸಾವಿರಾರು ಮೀನುಗಳನ್ನು ರೈತರು ಅಲ್ಲಲ್ಲಿ ಗುಂಡಿ ತೋಡಿ ಮುಚ್ಚುತ್ತಿದ್ದಾರೆ. ಒಂದೆಡೆ ನೀರಿಲ್ಲ, ಮತ್ತೊಂದೆಡೆ ಬಿಸಿಲು. ಇದರಿಂದ ನೀರಿಲ್ಲದೇ ಮೀನುಗಳು ಸಾವನ್ನಪ್ಪುತ್ತಿವೆ. ಇದರಿಂದ ಮೀನುಗಾರರಲ್ಲಿ ಆತಂಕ ಮೂಡಿದೆ. 10 ರಿಂದ 15 ದಿನಗಳವರೆಗೆ ಮಾತ್ರ ಕೃಷ್ಣಾ ನದಿಯಲ್ಲಿ ನೀರು ಲಭ್ಯವಿರಲಿದೆ. ನಂತರ ಸರಿಯಾಗಿ ಮಳೆಯಾಗದೇ ಇದ್ದರೆ, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ.
ಇದನ್ನೂ ಓದಿ:ಕೆಆರ್ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತ: ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ