ರಾಹುಲ್ ಗಾಂಧಿಗೆ ಚಾಮುಂಡೇಶ್ವರಿ ವಿಗ್ರಹ, ರಾಖಿ, ಗೌರಿ ಗಣೇಶ ಹಬ್ಬದ ಬಾಗಿನ ನೀಡಿ ಸ್ವಾಗತಿಸಿದ ಕೆಪಿಸಿಸಿ ಮಹಿಳಾ ಘಟಕ
Published : Aug 30, 2023, 2:08 PM IST
|Updated : Aug 30, 2023, 3:02 PM IST
ಮೈಸೂರು: ಗೃಹ ಲಕ್ಷ್ಮಿ ಯೋಜನೆ ಜಾರಿ ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರಿಗೆ ಕೆಪಿಸಿಸಿಯ ಮಹಿಳಾ ಘಟಕದ ವತಿಯಿಂದ ವಿಶೇಷವಾಗಿ ಸ್ವಾಗತಿಸಲಾಯಿತು. ಇಂದು ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹ ಲಕ್ಷ್ಮಿ ಯೋಜನೆಯ ಜಾರಿ ಕಾರ್ಯಕ್ರಮ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದು. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ಮಹಿಳಾ ಕಾಂಗ್ರೆಸ್ನ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಇತರ ಸದಸ್ಯರು ಆಗಮಿಸಿದ್ದರು. ಶಕ್ತಿ ರೂಪಿಣಿ ಚಾಮುಂಡೇಶ್ವರಿ ತಾಯಿಯ ವಿಗ್ರಹ ಹಾಗೂ ರಾಹುಲ್ ಗಾಂಧಿ ಅವರಿಗೆ ರಾಖಿ ಮತ್ತು ಗೌರಿ ಗಣೇಶ ಹಬ್ಬದ ಬಾಗಿನ ನೀಡಿ ಅವರು ಸ್ವಾಗತಿಸಿದರು.
ಐದು ಗ್ಯಾರಂಟಿ ಯೋಜನೆಗಳ ನಾಲ್ಕನೇ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆನ್ಲೈನ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು. ಈ ಯೋಜನೆಯಲ್ಲಿ ಮನೆಯ ಮಹಿಳಾ ಮುಖ್ಯಸ್ಥರಿಗೆ 2 ಸಾವಿರ ರೂ. ಸಹಾಯಧನವನ್ನು ಸರ್ಕಾರ ನೀಡಲಿದೆ. ರಾಜ್ಯದಲ್ಲಿ ಈಗಾಗಲೇ ಶೇ. 86ರಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. 1.28 ಕೋಟಿ ಕುಟುಂಬದ ಯಜಮಾನಿಯರು ಯೋಜನೆಯ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ:ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ