ಕರ್ನಾಟಕ

karnataka

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ETV Bharat / videos

ಕೃಷ್ಣಮಠಕ್ಕೆ ಜಾಗ ನೀಡಿದ್ದು ರಾಮಭೋಜ ಅರಸ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - ETV Bharat kannada News

By

Published : Mar 9, 2023, 11:39 AM IST

ತುಮಕೂರು :ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವಿಚಾರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿ, "ಯಾರು ಏನೇ ಹೇಳಬಹುದು. ಆಧಾರ ಒದಗಿಸಿದರೆ ಮಾತಿಗೆ ಬೆಲೆ ಇರುತ್ತದೆ" ಎಂದರು.   

ತುಮಕೂರಿನಲ್ಲಿ ಬುಧವಾರ ಮಾತನಾಡಿದ ಶ್ರೀಗಳು, "ಆಧಾರರಹಿತವಾಗಿ ಏನು ಬೇಕಾದರೂ ಹೇಳಬಹುದು. ಅಂತಹ ಮಾತನ್ನಿಟ್ಟುಕೊಂಡು ಚರ್ಚೆಗೆ ಬಂದಾಗ ಅದಕ್ಕೆ ಅರ್ಥವಿರುವುದಿಲ್ಲ. ಕೃಷ್ಣ ಮಠದ ಸನ್ನಿಧಾನಕ್ಕೆ ಜಾಗ ನೀಡಿರುವುದು ರಾಮಭೋಜ ಎಂಬ ಅರಸ. ಯಾವುದೇ ಮುಸ್ಲಿಂ ರಾಜ ಅಲ್ಲ. ಇದಕ್ಕೆ ನಮ್ಮಲ್ಲಿ ಆಧಾರಗಳಿವೆ" ಎಂದು ಹೇಳಿದರು.  

"ಮಹಾ ಗುರುಗಳು ಮತ್ತು ರಾಘವೇಂದ್ರ ಶ್ರೀಗಳ ಜೊತೆಗೆ ಮುಸ್ಲಿಂ ರಾಜರ ಸಂಬಂಧ ಯಾವ ರೀತಿ ಇತ್ತು ಎಂದು ಹೇಳುವ ಸಂದರ್ಭದಲ್ಲಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಗುರುಗಳು ಕೃಷ್ಣ ಮಠಕ್ಕೆ ಜಾಗ ಕೊಟ್ಟಿರುವ ಬಗ್ಗೆ ಹೇಳಿಲ್ಲ. ಇದಕ್ಕೆ ಬದಲಾಗಿ, ಮಧ್ವಾಚಾರ್ಯರು ತಮ್ಮ ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ದರು. ಹಾಗೆ ಯಾತ್ರೆಗೆ ಹೋಗುವಾಗ ಅವರು ಗಂಗಾ ನದಿ ದಾಟಬೇಕಿತ್ತು. ಆ ಕಾಲದಲ್ಲಿ ಅಲ್ಲೊಬ್ಬ ರಾಜ ಆಳ್ವಿಕೆ ಮಾಡುತ್ತಿದ್ದ. ಆತ ನದಿ ದಾಟಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಿದ್ದ. ಮಧ್ವಾಚಾರ್ಯರು ಗಂಗಾ ನದಿಯನ್ನು ಈಜಿಯೇ ದಾಟಲು ಮುಂದಾಗಿದ್ದರು."  

"ಶಿಷ್ಯರಿಗೆ ತಮ್ಮ ಕಾಲು ಹಿಡಿದುಕೊಳ್ಳಲು ಹೇಳಿ ನದಿ ದಾಟುವಾಗ ರಾಜ ಮತ್ತು ಸೈನಿಕರು ರಾಜ್ಯಕ್ಕೆ ಶತ್ರುಗಳು ಆಕ್ರಮಣ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಓಡಿ ಹೋದರು. ಆದರೆ ಮಧ್ವಾಚಾರ್ಯರು ಸ್ವಲ್ಪವೂ ಹೆದರದೇ ಅವರಿಗೆ ನದಿಗಿಳಿಯದಂತೆ ತಿಳಿಹೇಳಿದರು. ರಾಜ ಹಾಗೂ ಗುರುಗಳ ನಡುವೆ ಮಾತುಕತೆ ನಡೆದು ಗುರುಗಳ ಮಾತುಗಳಿಗೆ ಸೋತು ಶರಣಾದ ರಾಜ, ಆಚಾರ್ಯರ ವ್ಯಕ್ತಿತ್ವವನ್ನು ಕಂಡು ಅಲ್ಲಿನ ಅರ್ಧ ರಾಜ್ಯ ದಾನ ಮಾಡುತ್ತಾನೆ. ಅದನ್ನು ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆಯೇ ಹೊರತು ಉಡುಪಿ ಮಠದ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದು ಅಂತಾ ಹೇಳಿಲ್ಲ. ಈ ಗೊಂದಲದಿಂದ ಅವರು ಹೇಳಿಕೆ ಕೊಟ್ಟಿರಬಹುದು. ಆದರೆ ಅದು ಆಧಾರರಹಿತ. ಚರ್ಚೆ ಮುಂದುವರಿಸೋದು ಅರ್ಥಹೀನ" ಎಂದು ಶ್ರೀಗಳು ವಿವರಿಸಿದರು.

ಇದನ್ನೂ ಓದಿ:ಬಸ್ತಿಬೆಟ್ಟದಲ್ಲಿ ಮಹಾವೀರ ತೀರ್ಥಂಕರರ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

ABOUT THE AUTHOR

...view details