ಕೇರಳದಲ್ಲಿ ಮುಂಗಾರು ಅಬ್ಬರ: ಗ್ರಾಮಗಳಿಗೆ ನುಗ್ಗಿದ ನೀರು, ಕೃತಕ ನೆರೆಗೆ ಗ್ರಾಮಸ್ಥರು ಕಂಗಾಲು - ಗ್ರಾಮಸ್ಥರು ದೋಣಿ ಮೂಲಕ ಸಂಚರಿಸಬೇಕಾದ ಪರಿಸ್ಥಿತಿ
ಆಲಪ್ಪುಳ (ಕೇರಳ) :ಕೇರಳದಾದ್ಯಂತ ಮುಂಗಾರು ಅಬ್ಬರ ಮುಂದುವರೆದಿದ್ದು, ಗ್ರಾಮಗಳಿಗೆ ನೀರು ನುಗ್ಗಿ ಕೃತಕ ನೆರೆ ಉಂಟಾಗಿದೆ. ಇದರಿಂದಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಲಪ್ಪುಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿನ ಕೆಲಮಂಗಳಂ ತಕಾಲಿ ಗ್ರಾಮವು ಜಲಾವೃತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ದೋಣಿ ಮೂಲಕ ಸಂಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ.
ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆ ಹಿನ್ನೆಲೆಯಲ್ಲಿ ಕೇರಳದ ಒಟ್ಟು ಐದು ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಹಿನ್ನೆಲೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವ ವಿದ್ಯಾಲಯ ಮತ್ತು ಕಣ್ಣೂರು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪರೀಕ್ಷಾ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ, ಕಳೆದೆರಡು ದಿನದಲ್ಲಿ ಕೇರಳದಾದ್ಯಂತ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ :ಅಂತ್ಯಸಂಸ್ಕಾರದ ವೇಳೆ ರುದ್ರಭೂಮಿಗೆ ನುಗ್ಗಿದ ಮಳೆ ನೀರು; ಜನರ ಪರದಾಟ